ಬೆಂಗಳೂರಿನಲ್ಲಿ 57 ವರ್ಷದ ಹಿರಿಯ ಐಟಿ ಉದ್ಯೋಗಿ ಮಹಿಳೆಯೊಬ್ಬರು ‘ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚನೆಗೆ ಬಲಿಯಾಗಿ ಬರೋಬ್ಬರಿ ₹ 31.83 ಕೋಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಈ ವಂಚನೆ ನಡೆದಿದ್ದು, ಕರ್ನಾಟಕದಲ್ಲಿ ಒಂದೇ ವ್ಯಕ್ತಿಯು ಕಳೆದುಕೊಂಡ ಅತಿ ದೊಡ್ಡ ಮೊತ್ತ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದಿರಾನಗರ ನಿವಾಸಿಯಾಗಿರುವ ಈ ಸಂತ್ರಸ್ತೆ, ಸೀನಿಯರ್ ಐಟಿ ವೃತ್ತಿಪರರಾಗಿದ್ದಾರೆ. ಈ ವಂಚನೆಯು ಸೆಪ್ಟೆಂಬರ್ 15, 2024 ರಂದು ಆರಂಭಗೊಂಡಿತು. ಸಂತ್ರಸ್ತೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ತಾನು ಕೊರಿಯರ್ ಸೇವೆ ಡಿಎಚ್‌ಎಲ್ (DHL) ನಿಂದ ಮಾತನಾಡುವುದಾಗಿ ಹೇಳಿ, ಅವರ ಹೆಸರಿನಲ್ಲಿರುವ ಒಂದು ಪಾರ್ಸೆಲ್ ಮುಂಬೈನ ಅಂಧೇರಿಯಲ್ಲಿ ಸಿಕ್ಕಿಬಿದ್ದಿದೆ ಎಂದಿದ್ದಾರೆ. ಆ ಪಾರ್ಸೆಲ್‌ನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷಿದ್ಧ ಎಂಡಿಎಂಎ (MDMA) ಮಾದಕ ವಸ್ತುಗಳಿರುವುದಾಗಿ ಆತ ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ತಮಗೆ ಈ ಪಾರ್ಸೆಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೂಡಲೇ, ಕರೆ ಮಾಡಿದ ವಂಚಕರು, ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡುವಂತೆ ಸೂಚಿಸಿ ಕರೆಯನ್ನು ಸಿಬಿಐ ಅಧಿಕಾರಿಯಂತೆ ನಟಿಸಿದ ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸಿದ್ದಾರೆ. ಸಿಬಿಐ ಅಧಿಕಾರಿ ಸೋಗಿನಲ್ಲಿ ಮಾತನಾಡಿದ ಆರೋಪಿಗಳು, ಮಹಿಳೆಯ ಗುರುತನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಂಬಿಸಿ ಭಯ ಹುಟ್ಟಿಸಿದ್ದಾರೆ. ಸ್ಥಳೀಯ ಪೊಲೀಸರು ಅಥವಾ ವಕೀಲರನ್ನು ಸಂಪರ್ಕಿಸಿದರೆ ಕುಟುಂಬ ಸದಸ್ಯರನ್ನು ಸಹ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮಗನ ಮದುವೆ ಸಮೀಪಿಸುತ್ತಿದ್ದ ಕಾರಣ, ಕಾನೂನು ತೊಡಕಿಗೆ ಹೆದರಿದ ಮಹಿಳೆ ವಂಚಕರ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದಾರೆ.
ಬಳಿಕ ನಂತರದ ದಿನಗಳಲ್ಲಿ, ಆಕೆಯನ್ನು ಕ್ಯಾಮೆರಾ ಆನ್ ಮಾಡಿದ ಸ್ಕೈಪ್ ಕರೆಯ ಮೂಲಕ “ಗೃಹಬಂಧನ” ದಲ್ಲಿ ಇರಿಸಲಾಯಿತು. ಪ್ರದೀಪ್ ಸಿಂಗ್ ಎಂದು ಗುರುತಿಸಿಕೊಂಡ ಸಿಬಿಐ ಅಧಿಕಾರಿ ಸೋಗಿನ ಮುಖ್ಯ ವಂಚಕ, ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಒಂದು ವಾರದವರೆಗೆ ಆಕೆಯ ಚಲನವಲನಗಳನ್ನು ‘ಮೇಲ್ವಿಚಾರಣೆ’ ಮಾಡಲು ನಿಯೋಜಿಸಿದ್ದನು. ಈ ಅವಧಿಯಲ್ಲಿ ಸಂತ್ರಸ್ತೆ ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ.
ಸೆಪ್ಟೆಂಬರ್ 23, 2024 ರಂದು, ಸಿಂಗ್ ಎಂಬಾತ ಮಹಿಳೆಯನ್ನು ಹೋಟೆಲ್‌ವೊಂದರಲ್ಲಿ ವಿಚಾರಣೆ ನಡೆಸಿ, ಆಕೆಯ ಎಲ್ಲಾ ಆಸ್ತಿ ವಿವರಗಳನ್ನು ಆರ್‌ಬಿಐನ “ಹಣಕಾಸು ಗುಪ್ತಚರ ಘಟಕ (FIU)”ಕ್ಕೆ ಘೋಷಿಸುವಂತೆ ಸೂಚಿಸಿದ್ದಾನೆ. ವಂಚಕರ ಸೂಚನೆ ಮೇರೆಗೆ ಮಹಿಳೆ ತಮ್ಮ ಸ್ಥಿರ ಠೇವಣಿ(FD)ಗಳನ್ನು ಮುರಿದು ಮತ್ತು ಉಳಿತಾಯವನ್ನು ನಗದೀಕರಿಸಿ ಒಟ್ಟು 187 ವಹಿವಾಟು(Transaction)ಗಳಲ್ಲಿ ₹ 31.83 ಕೋಟಿ ಹಣವನ್ನು ವರ್ಗಾಯಿಸಿದ್ದಾರೆ. “ಪರಿಶೀಲನೆ” ಬಳಿಕ ಹಣವನ್ನು ಫೆಬ್ರವರಿ 2025 ರೊಳಗೆ ಹಿಂದಿರುಗಿಸಲಾಗುವುದು ಎಂದು ವಂಚಕರು ಭರವಸೆ ನೀಡಿದ್ದರು.
ಡಿಸೆಂಬರ್ 1, 2024 ರಂದು, ಮಗನ ನಿಶ್ಚಿತಾರ್ಥದ ಕೆಲವೇ ದಿನಗಳ ಮೊದಲು, ಮಹಿಳೆಗೆ ‘ಕ್ಲಿಯರೆನ್ಸ್ ಸರ್ಟಿಫಿಕೇಟ್’ ಸಹ ಕಳುಹಿಸಿದ್ದರು. ಆದರೆ, ಮಾರ್ಚ್ 2025 ರವರೆಗೆ ಯಾವುದೇ ಹಣ ಹಿಂದಿರುಗಿಸದೆ ಒಂದಲ್ಲಾ ಒಂದು ಕಾರಣ ನೀಡುತ್ತಾ ಸತಾಯಿಸಿದರು. ಮಾರ್ಚ್ 26 ರಂದು ವಂಚಕರು ದಿಢೀರನೆ ಎಲ್ಲಾ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಸಂಪೂರ್ಣ ಅವಧಿಯಲ್ಲಿ ಮಹಿಳೆ ಬೆದರಿಕೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು.
ತೀವ್ರ ಆಘಾತದಿಂದ, ಮಗನ ಮದುವೆ ಕಾರ್ಯಕ್ರಮಗಳು ಮತ್ತು ಅನಾರೋಗ್ಯದಿಂದಾಗಿ ದೂರು ನೀಡಲು ವಿಳಂಬವಾಯಿತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೂರ್ವ ಸೈಬರ್ ಕ್ರೈಂ ಪೊಲೀಸರು ನವೆಂಬರ್ 14 ರಂದು ಎಫ್‌ಐಆರ್ ದಾಖಲಿಸಿ, ತನಿಖೆ ಪ್ರಾರಂಭಿಸಿದ್ದಾರೆ. ಕಳೆದುಹೋದ ಮೊತ್ತ ₹3 ಕೋಟಿಗಿಂತ ಹೆಚ್ಚಿರುವುದರಿಂದ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






