ಕುಮಟಾ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದ ವಿದೇಶಿ ಮಹಿಳೆಯನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಗೋಕರ್ಣದ ಕುಡ್ಲೇ ಕಡಲತೀರದಲ್ಲಿ ನಡೆದಿದೆ. ಐದಾಲಿ(25) ರಕ್ಷಣೆಗೊಳಗಾದ ವಿದೇಶಿ ಮಹಿಳೆಯಾಗಿದ್ದಾರೆ.
ರಷ್ಯಾ ಸಮೀಪದ ಕಜಕಿಸ್ತಾನ ಮೂಲದ ಐದಾಲಿ ಪತಿಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸೋಮವಾರ ಕುಡ್ಲೇ ಬೀಚ್‌ಗೆ ಬಂದಿದ್ದ ವೇಳೆ ಮಹಿಳೆ ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಆಕೆ ಮುಳುಗುವ ಹಂತದಲ್ಲಿದ್ದು, ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ, ಗಿರೀಶ ಗೌಡ, ನಾಗೇಂದ್ರ ಕುರ್ಲೆ ಹಾಗೂ ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಲಕ್ಷ್ಮಿಕಾಂತ ಹರಿಕಂತ್ರ ಅವರು ಕೂಡಲೇ ಜೆಟ್ ಸ್ಕೀ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.
ಭಾರೀ ಗಾಳಿ ಬೀಸುತ್ತಿರುವ ಹಿನ್ನಲೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು. ಅಪಾಯವನ್ನೂ ಲೆಕ್ಕಿಸದೇ ಲೈಫ್ ಗಾರ್ಡ್ ಸಿಬ್ಬಂದಿ ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.






