ಬೆಂಗಳೂರು: ರಾಜ್ಯ ಸರ್ಕಾರವು 46 ಕಸ ಗುಡಿಸುವ ಯಂತ್ರಗಳನ್ನು (Road sweeping machines) 7 ವರ್ಷಗಳವರೆಗೆ ಬಾಡಿಗೆ ಆಧಾರದಲ್ಲಿ ಪಡೆಯಲು ₹613 ಕೋಟಿ (₹613 crore) ವೆಚ್ಚದ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸರ್ಕಾರದ ಈ ನಿರ್ಧಾರದ ಹಿಂದೆ “ಬಾಡಿಗೆ ನೆಪದಲ್ಲಿ ಕಮೀಷನ್ ಗೋಲ್ ಮಾಲ್” ನಡೆಯುತ್ತಿದೆ ಎಂದು ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
“ಬಾಡಿಗೆಗಿಂತ ಖರೀದಿಸಿದ್ದರೆ ಸರ್ಕಾರಕ್ಕೆ(Government)ಬಹಳ ಕಡಿಮೆ ವೆಚ್ಚವಾಗುತ್ತಿತ್ತು. ಇದು ತಪ್ಪು ಲೆಕ್ಕಾಚಾರವೂ ಅಲ್ಲ — ಗಣಿತವನ್ನು ಹಾಡಹಗಲೇ ಕೊಂದು, ದಹನ ಮಾಡಲಾಗಿದೆ” ಎಂದು ಟೀಕಿಸಿದ್ದಾರೆ.
ಸರ್ಕಾರವು 46 ಯಂತ್ರಗಳಿಗೆ ಪ್ರತಿ ಯಂತ್ರಕ್ಕೆ ₹1.9 ಕೋಟಿಯಂತೆ ₹613 ಕೋಟಿ ಬಾಡಿಗೆ ನೀಡಲು ಹೊರಟಿದೆ. ಅದೇ ಯಂತ್ರಗಳನ್ನು ನೇರವಾಗಿ ಖರೀದಿಸಲು ಕೇವಲ ₹1.3 ರಿಂದ ₹3 ಕೋಟಿ ಖರ್ಚಾಗುತ್ತಿತ್ತು.
ಈಗಾಗಲೇ ಜಿಬಿಎ (GBA) ಯಾರ್ಡ್ಗಳಲ್ಲಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಬಿದ್ದಿದ್ದರೂ, ಹೆಚ್ಚುವರಿಯಾಗಿ 46 ಯಂತ್ರಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸುವುದು ಏಕೆ ಎಂಬ ಪ್ರಶ್ನೆಯನ್ನು ನಿಖಿಲ್ ಎತ್ತಿದ್ದಾರೆ.






