ಶಿವಮೊಗ್ಗ ನಗರದಲ್ಲಿ ಕೋಮು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಿಂದೂ ಕುಟುಂಬವೊಂದು ಬೆಚ್ಚಿಬಿದ್ದ ಘಟನೆ ವರದಿಯಾಗಿದೆ. ನಗರದ ಮಾರ್ನಮಿ ಬೈಲ್ ಪ್ರದೇಶದಲ್ಲಿ, ಹಿಂದೂ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ನೀನು ಹಿಂದೂನಾ? ಮುಸ್ಲಿಮಾ? ಎಂದು ಧರ್ಮದ ಬಗ್ಗೆ ವಿಚಾರಿಸಿ, ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಅಮಾನವೀಯ ಕೃತ್ಯ ನಡೆದಿದೆ.
ಮತಾಂಧರ ಗುಂಪಿನ ದಾಳಿಗೆ ಒಳಗಾದ ಯುವಕನನ್ನು ಹರೀಶ ಎಂದು ಗುರುತಿಸಲಾಗಿದೆ. ಪುಂಡರು ಮೊದಲು ಹರೀಶ್‌ನನ್ನು ತಡೆದು ನಿಲ್ಲಿಸಿ, “ನೀನು ಹಿಂದೂನಾ? ಮುಸ್ಲಿಮಾ?” ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಹರೀಶ್ ತಾನು ಹಿಂದೂ ಎಂದು ಹೇಳಿದ ತಕ್ಷಣವೇ, ಆ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಆತನ ಬಳಿಯಿದ್ದ ಹಣವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಅನಿರೀಕ್ಷಿತ ದೌರ್ಜನ್ಯದಿಂದಾಗಿ ಹರೀಶ್ ಮತ್ತು ಆತನ ಕುಟುಂಬ ಆತಂಕಕ್ಕೆ ಒಳಗಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೊಲೀಸ್ ಇಲಾಖೆಯ ಈ ನಡೆಯಿಂದ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಶಾಸಕ ಹಾಗೂ ಬಿಜೆಪಿ ನಾಯಕರಾದ ಚನ್ನಬಸಪ್ಪ ಅವರು ಸ್ಥಳೀಯರೊಂದಿಗೆ ಠಾಣೆಗೆ ಆಗಮಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಪೊಲೀಸ್ ಇಲಾಖೆ ಸತ್ತಿದೆಯಾ? ಬದುಕಿದೆಯಾ?” ಎಂದು ಶಾಸಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ಶಾಸಕರ ಈ ದಿಢೀರ್ ಭೇಟಿ ಮತ್ತು ತೀವ್ರ ಒತ್ತಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು, ಅಂತಿಮವಾಗಿ ಯುವಕ ಹರೀಶ್ ಅವರ ಮೇಲಿನ ಹಲ್ಲೆ ಮತ್ತು ಹಣ ದೋಚಿದ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ದುಷ್ಕರ್ಮಿಗಳ ತಂಡದ ಈ ಕೃತ್ಯ ಇದೀಗ ಇಡೀ ರಾಜ್ಯದಾದ್ಯಂತ ಸದ್ದು ಮಾಡುತ್ತಿದ್ದು, ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ.






