ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ತೀವ್ರವಾದ ಶೀತ ಅಲೆಯು ಆವರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಡಿಸೆಂಬರ್ 18 ರಂದು ‘ರೆಡ್ ಅಲರ್ಟ್’ ಮತ್ತು ಡಿಸೆಂಬರ್ 20ರ ವರೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಜನತೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಈ ತೀವ್ರ ಶೀತ ಅಲೆಯ ಅವಧಿಯಲ್ಲಿ, ಜಿಲ್ಲೆಯಾದ್ಯಂತ ಸಾಮಾನ್ಯ ತಾಪಮಾನಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗಿನ ಜಾವದಲ್ಲಿ ತೀವ್ರವಾದ ಶೀತ ಗಾಳಿ ಬೀಸುವ ಸಂಭವವಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
ಶೀತ ಮತ್ತು ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದಾರೆ. ವೃದ್ಧರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಅವರನ್ನು ಬೆಚ್ಚನೆಯ ವಾತಾವರಣದಲ್ಲಿ ಇರಿಸಲು ಸಲಹೆ ನೀಡಲಾಗಿದೆ.
ಅಲ್ಲದೆ, ಸಾರ್ವಜನಿಕರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತ್ರದ ನಂತರ ವಾಯುವಿಹಾರ (ವಾಕಿಂಗ್) ಮಾಡುವುದನ್ನು ಕಡಿಮೆ ಮಾಡಬೇಕು. ಗ್ರಾಮೀಣ ಭಾಗದ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ಓಡಾಡಬಾರದು. ಅನಗತ್ಯವಾಗಿ ಪ್ರವಾಸ ಮಾಡುವುದರಿಂದಲೂ ದೂರವಿರಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಜಾನುವಾರುಗಳನ್ನು ಸಹ ಶೀತ ಗಾಳಿಯಿಂದ ರಕ್ಷಿಸಲು ಶೆಡ್‌ಗಳ ಒಳಗೆ ಸುರಕ್ಷಿತವಾಗಿ ಇರಿಸಲು ಸಲಹೆ ನೀಡಲಾಗಿದೆ.
ಶೀತ ಅಲೆಯ ಪ್ರಭಾವ ಕಡಿಮೆಯಾಗುವವರೆಗೆ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಬಿ. ಫೌಝಿಯಾ ತರನ್ನುಮ್ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.






