ಬಳ್ಳಾರಿ: ಬಳ್ಳಾರಿಯಲ್ಲಿನ ಜೀನ್ಸ್ ಉದ್ಯಮಕ್ಕೆ ಭಾರೀ ಹಿನ್ನಡೆಯಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB), ಪರಿಸರಕ್ಕೆ ಹಾನಿ ಮಾಡುತ್ತಿದ್ದ ಆರೋಪದ ಮೇಲೆ ಒಟ್ಟು 36 ಜೀನ್ಸ್ ವಾಷಿಂಗ್ ಘಟಕಗಳಿಗೆ ಬೀಗ ಜಡಿದಿದೆ. ಈ ಘಟಕಗಳು ತಮ್ಮ ಕೈಗಾರಿಕಾ ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ಪರಿಸರಕ್ಕೆ ಬಿಡುತ್ತಿದ್ದುದರಿಂದ ಈ ಕ್ರಮ ಕೈಗೊಂಡಿದ್ದಾಗಿ ಮಂಡಳಿ ತಿಳಿಸಿದೆ.
ಈ ಜೀನ್ಸ್ ವಾಷಿಂಗ್ ಘಟಕಗಳು ಬಳಸುವ ರಾಸಾಯನಿಕಯುಕ್ತ ನೀರು ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಘಟಕಗಳಿಗೆ ತಮ್ಮ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹೊರಗೆ ಬಿಡುವಂತೆ ಹಲವು ಬಾರಿ ನೋಟಿಸ್ ನೀಡಿ ಎಚ್ಚರಿಕೆ ನೀಡಿತ್ತು. ಆದರೂ ಸಹ ಘಟಕಗಳ ಮಾಲೀಕರು ಎಚ್ಚೆತ್ತುಕೊಳ್ಳದ ಕಾರಣ, ಅಂತಿಮವಾಗಿ KSPCB ಸಿಬ್ಬಂದಿ ಕಾರ್ಯಾಚರಣೆ ನಡೆಸಿ 36 ಘಟಕಗಳನ್ನು ಬಂದ್ ಮಾಡಿದ್ದಾರೆ.
ಮಂಡಳಿಯ ಆದೇಶದ ಮೇರೆಗೆ, ಈ ಘಟಕಗಳಿಗೆ ಜೆಸ್ಕಾಂ (GESCOM) ಸಹ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರದಿಂದ ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಭಾರೀ ಮರ್ಮಾಘಾತ ಉಂಟಾಗಿದ್ದು, ಪರಿಸರ ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರವು ಮುಂದಾಗಿರುವುದು ಸ್ಪಷ್ಟವಾಗಿದೆ.






