ಬೆಂಗಳೂರು: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಗ್ರೂಪ್ “ಸಿ” ನೌಕರರಿಗೆ ಇಲಾಖೆಯು ಮಹತ್ವದ ಮುಂಬಡ್ತಿ ನೀಡಿದೆ. ಇಲಾಖೆಯ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದ ಹಾಗೂ ಉಳಿಕೆ ಮೂಲ ವೃಂದದ ಗ್ರೂಪ್ “ಸಿ” ವೃಂದದ ಲೆಕ್ಕ ಸಹಾಯಕರು ಮತ್ತು ಶೀಘ್ರಲಿಪಿಗಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗ್ರೂಪ್ “ಬಿ” ವೃಂದದ ಲೆಕ್ಕಾಧೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿ ಪ್ರಧಾನ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಬಡ್ತಿಯ ಅಡಿಯಲ್ಲಿ ಗ್ರೂಪ್ ‘ಸಿ’ ಸಿಬ್ಬಂದಿಗೆ ರೂ. 65,950 ರಿಂದ ರೂ. 1,24,900 ರವರೆಗಿನ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಮುಂಬಡ್ತಿ ಪಡೆದ ನೌಕರರನ್ನು ಆದೇಶದಲ್ಲಿ ಸೂಚಿಸಲಾದ ಸ್ಥಳಗಳಿಗೆ ನಿಯೋಜಿಸಲಾಗಿದೆ. ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಯಾವುದೇ ಬದಲಿ ವ್ಯವಸ್ಥೆಗಾಗಿ ಕಾಯದೆ ಕೂಡಲೇ ಈ ಆದೇಶದಂತೆ ಬಡ್ತಿ ಹೊಂದಿದ ನೌಕರರನ್ನು ತಮ್ಮ ಕಚೇರಿಯಿಂದ ಕರ್ತವ್ಯ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಮುಂಬಡ್ತಿ ಹೊಂದಿರುವ ಲೆಕ್ಕ ಸಹಾಯಕರು ಮತ್ತು ಶೀಘ್ರಲಿಪಿಗಾರರು ಈ ಆದೇಶದ ಪ್ರತಿಯನ್ನು ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಿಂದ ಪಡೆದುಕೊಳ್ಳಬೇಕು. ಅಲ್ಲದೆ, ಬಡ್ತಿ ನೀಡಿ ಸ್ಥಳ ನಿಯೋಜಿಸಿದ ಕಚೇರಿಯಲ್ಲಿ 15 ದಿನದೊಳಗಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಈ ಬಡ್ತಿಯಿಂದ ತೆರವಾಗುವ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಿದೆ.
ಇನ್ನು ಮೂರು ಮಂದಿ ಲೆಕ್ಕ ಸಹಾಯಕರುಗಳಾದ ಲರೀಫಾ ಪಿ.ಎಸ್, ದಾವಲಬಿ ಚಾಂದೂ ಸಾಹಬ್ ಅಕ್ಕಿ ಮತ್ತು ವಾಗೀಶ್ ಬಾಳಿಕಾಯಿ ಅವರ ಕಾರ್ಯನಿರ್ವಹಣಾ ವರದಿಗಳು (APAR) ಇನ್ನೂ ಪ್ರಧಾನ ಕಚೇರಿಗೆ ತಲುಪದಿರುವ ಕಾರಣ, ಅವರ ಮುಂಬಡ್ತಿ ಕುರಿತು ಪರಿಶೀಲನೆ ಬಾಕಿ ಉಳಿದಿದೆ. ಈ ನೌಕರರು ಕಾರ್ಯನಿರ್ವಹಿಸುತ್ತಿರುವ ಕಚೇರಿ ಮುಖ್ಯಸ್ಥರಿಂದ ಕಾರ್ಯನಿರ್ವಹಣಾ ವರದಿ / ವಿಶೇಷ ವರದಿಗಳನ್ನು ಡಿಸೆಂಬರ್ 15, 2025 ರೊಳಗಾಗಿ ಪ್ರಧಾನ ಕಚೇರಿಗೆ ಸಲ್ಲಿಸಿದ ನಂತರವಷ್ಟೇ ಇವರ ಮುಂಬಡ್ತಿ ಕುರಿತು ಪರಿಶೀಲಿಸಿ ಆದೇಶ ಹೊರಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಮುಂಬಡ್ತಿ ಹೊಂದಿದ ನೌಕರರು ಪ್ರಸ್ತುತ ಕಚೇರಿಯಿಂದ ಬಿಡುಗಡೆಗೊಂಡ ಮತ್ತು ಹೊಸ ಹುದ್ದೆಗೆ ಕರ್ತವ್ಯಕ್ಕೆ ಹಾಜರಾದ ಕುರಿತು ಮಾಹಿತಿಯನ್ನು ಕಚೇರಿ ಮುಖ್ಯಸ್ಥರ ಮೂಲಕ ಪ್ರಧಾನ ನಿರ್ದೇಶಕರ ಕಚೇರಿಗೆ ಒದಗಿಸಲು ಕೋರಲಾಗಿದೆ.






