ಬೆಂಗಳೂರು: ಮೆಟ್ರೋ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆಂಗಳೂರು (Bangalore) ಮೆಟ್ರೋ ರೈಲು ನಿಗಮಕ್ಕೆ (BMRCL) ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಕಾಡುಗೋಡಿ ನಿವಾಸಿ ಬಿ.ಎಸ್. ರಾಜು (B.S. Raju) ಎಂಬಾತನಾಗಿದ್ದು, ಈತ ನವೆಂಬರ್ 13 ರಂದು ರಾತ್ರಿ 11:25 ಕ್ಕೆ BMRCL ಗೆ ಇ-ಮೇಲ್ (email) ಮಾಡುವ ಮೂಲಕ ಮೆಟ್ರೋ ನಿಲ್ದಾಣವನ್ನು (Metro station) ಸ್ಫೋಟಿಸುವ ಬೆದರಿಕೆ ಹಾಕಿದ್ದನು.
BMRCL ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ರಾಜು ತನ್ನ ಪತ್ನಿಗೆ ವಿಚ್ಛೇದನ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದನು ಎಂದು ತಿಳಿದುಬಂದಿದ್ದು, ಬಂಧಿತ ಆರೋಪಿಯ ಮೇಲ್ನೋಟದ ವರ್ತನೆ ಮಾನಸಿಕ ಅಸ್ವಸ್ಥನಂತೆ ಇರುವುದರಿಂದ, ಪೊಲೀಸರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ರವಾನಿಸಿದ್ದಾರೆ.






