ಬೆಂಗಳೂರು: ಪ್ರತಿಷ್ಠಿತ ಬೀಡಿ ಕಂಪನಿಯ ಲೋಗೋವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು, ನಕಲಿ ಬೀಡಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ₹ 22,000/- ಮೌಲ್ಯದ ನಕಲಿ ಬೀಡಿ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 13 ರಂದು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಯಶವಂತಪುರ ಲಾರಿ ಸ್ಟ್ಯಾಂಡ್ ಪ್ರದೇಶದಲ್ಲಿ ಅಕ್ರಮವಾಗಿ ನಕಲಿ ಬೀಡಿ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಈ ಮಾಹಿತಿಯ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು, ಕಾಪಿರೈಟ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ದಾಳಿ ನಡೆಸಿದರು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಆತ ಹೆಚ್ಚಿನ ಹಣಗಳಿಸುವ ದುರುದ್ದೇಶದಿಂದ ಮಂಗಳೂರಿನ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ತಯಾರಿಸಿದ ಬೀಡಿಗಳನ್ನು ಖರೀದಿಸುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಅವುಗಳನ್ನು ಪ್ರತಿಷ್ಠಿತ ಬೀಡಿ ಕಂಪನಿಯ ಲೋಗೋ ಇರುವ ಖಾಲಿ ಪ್ಯಾಕೆಟ್‌ಗಳಲ್ಲಿ ಹಾಕಿ ಮರು-ಪ್ಯಾಕ್ ಮಾಡುತ್ತಿದ್ದ. ಈ ನಕಲಿ ಬೀಡಿಗಳನ್ನು ಬೆಂಗಳೂರಿಗೆ ತಂದು, ಸಣ್ಣ ಟೀ ಸ್ಟಾಲ್‌ಗಳು ಮತ್ತು ಅಂಗಡಿಗಳಿಗೆ ಪ್ರತಿಷ್ಠಿತ ಕಂಪನಿಯ ಬೀಡಿಗಳೆಂದು ಹೇಳಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯ ವಶದಲ್ಲಿದ್ದ ಒಟ್ಟು 53 ನಕಲಿ ಬೀಡಿ ಬಂಡಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ₹ 22,000/- ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಯನ್ನು ನವೆಂಬರ್ 13 ರಂದೇ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಬಿ.ಎಸ್.ನೇಮಗೌಡ, ಐ.ಪಿ.ಎಸ್., ಯಶವಂತಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮೇರಿ ಶೈಲಜಾ ಅವರ ಮಾರ್ಗದರ್ಶನದಲ್ಲಿ, ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಸಿ. ಹರೀಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಗೊಳಿಸಿದೆ.






