ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಎದುರೇ ಪುಂಡರ ಗುಂಪೊಂದು ಅಟ್ಟಹಾಸ ಮೆರೆದ ಆಘಾತಕಾರಿ ಘಟನೆ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಬಹಿರಂಗ ಸವಾಲು ಹಾಕುವಂತೆ, ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಮಾರಾಮಾರಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಗಳೂರಿನಲ್ಲಿ ಪೊಲೀಸರೇ ಇಲ್ಲ, ಕಾನೂನಿನ ಭಯವೇ ಇಲ್ಲ ಎಂಬಂತೆ ವರ್ತಿಸಿದ ಈ ಯುವಕರು, ವಿಧಾನಸೌಧದ ಎದುರಿನ ರಸ್ತೆಯನ್ನೇ ಕಾದಾಟದ ಅಖಾಡವನ್ನಾಗಿ ಮಾಡಿಕೊಂಡಿದ್ದರು. ಪರಸ್ಪರ ಕೈಯಿಂದ ಗುದ್ದುುವುದು, ಕೆನ್ನೆಗೆ ಹೊಡೆದುಕೊಳ್ಳುವುದು ಮತ್ತು ಒದೆಯುವುದು ಮಾತ್ರವಲ್ಲದೆ, ರಕ್ಷಣೆಗೆ ಬಳಸಬೇಕಾದ ಹೆಲ್ಮೆಟ್‌ಗಳನ್ನೇ ಮಾರಕಾಸ್ತ್ರಗಳನ್ನಾಗಿ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ. ರಸ್ತೆಯಲ್ಲಿ ಕೈಗೆ ಸಿಕ್ಕ ವಸ್ತುಗಳಿಂದಲೂ ಬಡಿದಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಾರೆ.
ಅತ್ಯಂತ ನಾಚಿಕೆಗೇಡಿನ ಸಂಗತಿಯೆಂದರೆ, ಈ ಯುವಕರಿಗೆ ಕಾನೂನಿನ ಬಗ್ಗೆ ಕಿಂಚಿತ್ತೂ ಗೌರವವಾಗಲಿ, ಭಯವಾಗಲಿ ಇಲ್ಲದಿರುವುದು. ಸಾಕ್ಷಾತ್ ವಿಧಾನಸೌಧದ ನೆರಳಿನಲ್ಲೇ, ಸಾರ್ವಜನಿಕರು ನೋಡುತ್ತಿರುವಂತೆಯೇ ಗೂಂಡಾಗಳಂತೆ ವರ್ತಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅವರ ಈ ವರ್ತನೆ ಬೆಂಗಳೂರಿನ ಕಾನೂನು ಸುವ್ಯವಸ್ಥೆಗೆ ನೇರ ಅವಮಾನ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ವಿಧಾನಸೌಧದಂತಹ ಅತ್ಯಂತ ಭದ್ರತೆ ಇರುವ ಸ್ಥಳದಲ್ಲೇ ಇಂತಹ ಪುಂಡಾಟಿಕೆ ನಡೆದರೆ, ಇನ್ನು ಸಾಮಾನ್ಯ ಪ್ರದೇಶಗಳಲ್ಲಿ ಇವರ ಹಾವಳಿ ಎಷ್ಟಿರಬಹುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳನ್ನು ಕಾದಾಟದ ಮೈದಾನವನ್ನಾಗಿ ಮಾಡಿಕೊಂಡಿರುವ ಇಂತಹ ಕಿಡಿಗೇಡಿಗಳ ವಿರುದ್ಧ ಮತ್ತು ಕಾನೂನಿಗೆ ಹೆದರದ ಪುಂಡರ ವಿರುದ್ಧ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






