ಮಂಡ್ಯ: ವೇಗವಾಗಿ ಹಣ ಸಂಪಾದಿಸಿ ಶೋಕಿ ಜೀವನ ನಡೆಸುವ ದುಶ್ಚಟಕ್ಕೆ ಬಿದ್ದ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ (BMS College in Bengaluru) ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಮಂಡ್ಯ (Mandya) ಹೆದ್ದಾರಿಯಲ್ಲಿ ದರೋಡೆ (Robbery) ಕೃತ್ಯ ನಡೆಸಿ ಸಿಕ್ಕಿಬಿದ್ದಿದ್ದಾರೆ. ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ದರೋಡೆಯ ಮಾದರಿಯನ್ನೇ ಹೋಲುತ್ತದೆ.
ಆರೋಪಿಗಳಾದ ಕಿರಣ್, ಕುಶಾಲ್ ಬಾಬು (both 7th-semester students at BMS College)) ಮತ್ತು ಗೋಕುಲ್ ಬಿಎಂಎಸ್ ವಿದ್ಯಾರ್ಥಿಯೊಬ್ಬನ ಸಹೋದರ ಎಂದು ತಿಳಿದು ಬಂದಿದೆ. ಈ ಮೂವರು ದರೋಡೆ ಮಾಡಲೆಂದು ಹೊರ ರಾಜ್ಯದಿಂದ ಕಾರೊಂದನ್ನು ಬಾಡಿಗೆಗೆ ಪಡೆದಿದ್ದರು.
ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದ (Kengeri Bus Stand) ಬಳಿ ಬಸ್‌ಗಾಗಿ ಕಾಯುತ್ತಿದ್ದವರನ್ನು ಟಾರ್ಗೆಟ್ ಮಾಡುತ್ತಿದ್ದ ಇವರು, ‘ಕಾರ್‌ನಲ್ಲಿ ಡ್ರಾಪ್ ಮಾಡುತ್ತೇವೆ’ ಎಂದು ಹೇಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ನಂತರ ಮಂಡ್ಯದ ತೂಬಿನಕೆರೆ ಹಾಗೂ ಕರಿಘಟ್ಟ (Thubinakere and Karighatta) ಬಳಿಯ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಪ್ರಯಾಣಿಕರ ಕತ್ತಿಗೆ ಹಗ್ಗ ಹಾಕಿ ಬೆದರಿಸಿ, ಫೋನ್ ಮತ್ತು ಹಣ ಕದ್ದು ಪರಾರಿಯಾಗುತ್ತಿದ್ದರು.
ದರೋಡೆ ಮಾಡಿದ ಹಣವನ್ನು ಫೋನ್‌ಪೇ(PhonePe) ಮೂಲಕ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ (Betting applications)ರವಾನಿಸುತ್ತಿದ್ದರು. ಈ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು.
ಈ ಖದೀಮ ವಿದ್ಯಾರ್ಥಿಗಳು ಪೋಷಕರಿಗೆ ಪಿಜಿಯಲ್ಲಿ ಇರುವುದಾಗಿ ಸುಳ್ಳು ಹೇಳಿ, ಬೆಂಗಳೂರಿನಲ್ಲಿ ಫ್ಲಾಟ್ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ವಿರಾಜಪೇಟೆಯ ಅಬ್ದುಲ್ ಜಲೀಲ್ ಮತ್ತು ಮೈಸೂರಿನ ಯತೀಂದ್ರ ಎಂಬುವರಿಂದ ಹೀಗೆ ದರೋಡೆ ನಡೆಸಿದ್ದು, ಇವರ ದೂರಿನ ಆಧಾರದ ಮೇಲೆ ಮಂಡ್ಯ ಪೊಲೀಸರು ತಾಂತ್ರಿಕ ಸುಳಿವು ಹಿಡಿದು ದರೋಡೆಕೋರರನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಡಿವೈಎಸ್‌ಪಿ ಲಕ್ಷ್ಮೀನಾರಾಯಣ (DySP Lakshminarayana) ಮತ್ತು ಪಿಎಸ್‌ಐ ಶೇಷಾದ್ರಿ (PSI Seshadri) ನೇತೃತ್ವದ ಮಂಡ್ಯ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಡ್ಯ ಹಾಗೂ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.






