ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar) ಅವರು ಪಕ್ಷದ ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ (Local body elections)ಸಿದ್ಧರಾಗುವಂತೆ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ (Indira Gandhi) ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳಾ ನಾಯಕತ್ವ ಮತ್ತು ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು.
ರಾಜಕೀಯದಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ (33% reservation for women) ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ನಾವು ಮಹಿಳಾ ನಾಯಕತ್ವವನ್ನು ಬೆಳೆಸಬೇಕು. ನಾಯಕರನ್ನು ಹುಟ್ಟು ಹಾಕುವವನೇ ನಿಜವಾದ ನಾಯಕ. ಹೀಗಾಗಿ ಹೊಸ ಪ್ರತಿಭೆಗಳನ್ನು ಗುರಿತಿಸಿ ಬೆಳಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್‌ಗಳನ್ನು (369 wards) ಮಾಡಲಾಗಿದ್ದು, ಸದ್ಯದಲ್ಲೇ ಪಾಲಿಕೆ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಹೊಸ ಮತದಾರರ ಪಟ್ಟಿ ರಚನೆಯಾಗಲಿದ್ದು, ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ (Khata Yojana), ಆಸ್ತಿ ಗ್ಯಾರಂಟಿ ಯೋಜನೆಗಳನ್ನು (Aasthi Guarantee Yojana)ಜನರಿಗೆ ತಲುಪಿಸಿ ಪ್ರಚಾರ ಮಾಡುವಂತೆ ಕರೆ ನೀಡಿದರು.
ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿ ಪಟ್ಟಿ ಇಂದು ಬಿಡುಗಡೆಯಾಗಲಿದ್ದು, ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು ಎಂದು ತಿಳಿಸಿದರು.






