ತುಮಕೂರು: ಮೇಕೆದಾಟು ಯೋಜನೆಗೆ (Mekedatu project) ಸಂಬಂಧಿಸಿದ ಡಿಪಿಆರ್‌ಗೆ ಸುಪ್ರೀಂ ಕೋರ್ಟ್ ನೀಡಿರುವ ಪ್ರಾಥಮಿಕ ಹಸಿರು ನಿಶಾನೆ ಕರ್ನಾಟಕಕ್ಕೂ ತಮಿಳುನಾಡಿಗೂ (Tamil Nadu)ಸಮಾನ ಅನುಕೂಲ ಕಲ್ಪಿಸುವ ದಿಕ್ಕಿನ ಮಹತ್ವದ ಹೆಜ್ಜೆ ಎಂದು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಡಾ. ಹೆಚ್.ಡಿ. ರಂಗನಾಥ್ (Dr. H.D. Ranganath) ಸಂತಸ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಅವರು, “ಮೇಕೆದಾಟು ಪ್ರಶ್ನೆ ದಶಕಗಳಿಂದಲೂ ನಡೆದುಕೊಂಡು ಬಂದಿರುವ ಹೋರಾಟ. ಇಂದು ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ತೀರ್ಮಾನದಿಂದ ಯೋಜನೆ ಮುಂದಿನ ಹಂತವಾದ ಸಿ.ಡಬ್ಲ್ಯೂ.ಸಿ (Central Water Commission)ಗೆ ಸಾಗಲಿದೆ. ಈ ಯೋಜನೆ ಜಾರಿಗೆ ಬಂದರೆ ಹೇಮಾವತಿ ನದಿ (Hemavathi River) ನೀರು ಹಂಚಿಕೆಯ ಒತ್ತಡ ಬಹಳ ಮಟ್ಟಿಗೆ ಕಡಿಮೆಯಾಗುತ್ತೆ. ತುಮಕೂರು ಜಿಲ್ಲೆಗೆ (Tumakuru district) ಹೆಚ್ಚು ನೀರು ಬಳಸುವ ಅವಕಾಶ ಲಭಿಸುತ್ತೆ,” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Padayatra) ಭಾಗವಹಿಸಿದ್ದ ಕುಣಿಗಲ್ ಪ್ರದೇಶದ ಅನೇಕ ನಾಯಕರು ಹಾಗೂ ಕಾರ್ಯಕರ್ತರಿಗೆ ಅವರು ಧನ್ಯವಾದ ತಿಳಿಸಿದರು.
ಇದೇ ವೇಳೆ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಅವರು, “ಪುನರ್ ರಚನೆ ಮುಖ್ಯಮಂತ್ರಿಗಳ (Chief Minister) ಸಮಾಲೋಚನೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟ ವಿಚಾರ. ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ, ಆ ವಿಚಾರ ಮಾತನಾಡಲಿಕ್ಕೆ ನಾನು ಸೂಕ್ತ ವ್ಯಕ್ತಿ ಅಲ್ಲ. ತುಮಕೂರಿನ ಶಾಸಕರಿಗೆ ಒಂದು ಸ್ಥಾನ ಕೊಡಬೇಕು ಎಂದು ತಾನು ಹಿಂದೆಯೇ ಹೇಳಿದ್ದೇನೆ. ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಅಭಿಪ್ರಾಯ ತೆಗೆದುಕೊಳ್ಳುವಷ್ಟು ಅವಶ್ಯಕತೆ ಇಲ್ಲ ಎಂದು ಭಾವಿಸುವುದಾಗಿ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಚರ್ಚೆ ಕುರಿತು:ಪವರ್ ಶೇರಿಂಗ್ ಕುರಿತ ಪ್ರಶ್ನೆಯ ಬಗ್ಗೆ ಮಾತನಾಡುವುದೇ ಬೇಡ ಎಂದು ಸ್ಪಷ್ಟವಾಗಿ ಹೇಳಿದರು.“ನನಗೆ ಈಗಾಗಲೇ ನೋಟಿಸ್ ಬಂದಿದೆ. ಆದ್ದರಿಂದ ಅದರಲ್ಲಿ ಒಂದೇ ಪದ ಕೂಡ ಮಾತನಾಡುವುದಿಲ್ಲ,” ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಶಿಸ್ತಿನ ಸಿಪಾಯಿ: ಡಿ.ಕೆ. ಶಿವಕುಮಾರ್ (D.K. Shivakumar) ಅವರ ಬಗ್ಗೆ ಮಾತನಾಡಿ, “ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷ ಏನು ಕೆಲಸ ಕೊಡುತ್ತದೆಯೋ ಆ ಜವಾಬ್ದಾರಿಯ ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ. ನಮ್ಮ ಸಾಹೇಬ್ರು ಯಾವುದೇ ಕಾರಣದಿಂದ ಆ ರೀತಿ ಮಾಡುವುದಕ್ಕೆ ಹೋಗುವುದಿಲ್ಲ. ಡಿ.ಕೆ. ಶಿವಕುಮಾರ್ ಹುಟ್ಟಿನಿಂದಲೇ ಕಾಂಗ್ರೆಸ್ ಕಟ್ಟಾಳು ಇದ್ದಾರೆ, ಕಾಂಗ್ರೆಸ್‌ನವರೇ ಆಗಿ ಜೀವನ ಮಾಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.






