ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಕುರಿತು ಕರ್ನಾಟಕ ಹೈಕೋರ್ಟ್ ಗುರುವಾರ ಮಹತ್ವದ ನಿರ್ದೇಶನ ನೀಡಿದೆ. ಬೆಂಗಳೂರಿನ ವೈದ್ಯಕೀಯ ಆಸ್ಪತ್ರೆಯು ನಡೆಸಿದ ಆರೋಗ್ಯ ತಪಾಸಣಾ ಮೌಲ್ಯಮಾಪನ ವರದಿಯ ಕುರಿತು ನಿಲುವು ಕೈಗೊಳ್ಳುವಂತೆ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಸೂಚಿಸಿದೆ. ಇದೇ ವೇಳೆ, ಶಾಸಕ ಸೈಲ್ ಅವರ ಆರೋಗ್ಯ ತಪಾಸಣೆ ನಡೆಸಲು ನಿರಾಕರಿಸಿದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ದುರ್ವರ್ತನೆಗೆ ನ್ಯಾಯಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಾಮೀನುರಹಿತ ವಾರೆಂಟ್ ಹೊರಡಿಸಿರುವುದನ್ನು ಹಾಗೂ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ, ಸೈಲ್ ಪರ ವಕೀಲ ಸಂದೇಶ್ ಚೌಟ ಅವರು ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ಆರೋಗ್ಯ ಮೌಲ್ಯಮಾಪನ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಮೆಮೊವನ್ನು ಸಲ್ಲಿಸಿದರು. ಕಮಾಂಡ್ ಆಸ್ಪತ್ರೆಯಲ್ಲಿ ನವೆಂಬರ್ 13 ರಂದು ಮೌಲ್ಯಮಾಪನಕ್ಕೆ ಒಳಗಾಗುವಂತೆ ಸೈಲ್‌ಗೆ ಸೂಚಿಸಲಾಗಿತ್ತು. ಆದರೆ, ಕಮಾಂಡ್ ಆಸ್ಪತ್ರೆಯು ಇ-ಮೇಲ್ ಮೂಲಕ ತಪಾಸಣೆ ನಡೆಸಲು ನಿರಾಕರಿಸಿದ್ದು, ಸೂಕ್ತ ಸಿವಿಲ್ ಆಸ್ಪತ್ರೆ ಅಥವಾ ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗುವಂತೆ ಸೂಚಿಸಿತ್ತು.
ಈ ಸಂದರ್ಭದಲ್ಲಿ, ವಾದ ಮಂಡಿಸಿದ ಸೈಲ್ ಪರ ಹಿರಿಯ ವಕೀಲ ಸಂದೇಶ ಚೌಟ ಅವರು, ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ವರದಿಯಲ್ಲಿ ಸೈಲ್‌ಗೆ ಯಕೃತ್ ಬದಲಾವಣೆ (ಲಿವರ್ ಟ್ರಾನ್ಸ್‌ಪ್ಲಾಂಟ್) ಅಗತ್ಯವಿದೆ ಎಂದು ತಿಳಿಸಿರುವುದನ್ನು ಪೀಠದ ಗಮನಕ್ಕೆ ತಂದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು, ಸೈಲ್ ಅವರನ್ನು ಮತ್ತೊಮ್ಮೆ ಇಎಸ್‌ಐ ಆಸ್ಪತ್ರೆಗೆ ಕಳುಹಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೌಟ ಅವರು, ಈಗಾಗಲೇ ಎರಡು ಬಾರಿ ಇಎಸ್‌ಐ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದ್ದು, ಅಲ್ಲಿ ಜಠರ-ಕರುಳಿನ ವಿಭಾಗ (ಗ್ಯಾಸ್ಟ್ರೋಎಂಟರಾಲಜಿ) ಲಭ್ಯವಿಲ್ಲ ಎಂದು ತಿಳಿಸಿದರು. ಆಗ ಪೀಠವು, ಇ.ಡಿ. ಇನ್ನೊಂದು ವೈದ್ಯಕೀಯ ಅಭಿಪ್ರಾಯ ಪಡೆಯುವುದಾದರೆ ಪಡೆಯಬಹುದು ಎಂದು ಹೇಳಿದೆ.
ಅರ್ಜಿದಾರರ ಆರೋಗ್ಯ ತಪಾಸಣೆ ನಡೆಸಲು ನಿರಾಕರಿಸುವುದಲ್ಲದೆ, ನ್ಯಾಯಾಲಯಕ್ಕೆ ಅಗೌರವ ತೋರುವ ರೀತಿಯಲ್ಲಿ ಇ-ಮೇಲ್ ಬರೆದಿರುವ ಕಮಾಂಡ್ ಆಸ್ಪತ್ರೆಯ ನಡೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ. “ಕಮಾಂಡ್ ಆಸ್ಪತ್ರೆ ಕಳುಹಿಸಿರುವ ಇಮೇಲ್ ಏನಿದು? ನ್ಯಾಯಾಲಯ ಮನವಿ ಮಾಡಿದಾಗ, ಇದು ಉತ್ತರಿಸುವ ರೀತಿಯೇ? ಇದರಲ್ಲಿ ಸೌಜನ್ಯವೇ ಇಲ್ಲ. ನ್ಯಾಯಾಲಯ ಮನವಿ ಮಾಡಿದಾಗ ಅದು ನನಗೆ ಷರತ್ತಲ್ಲ (ಮ್ಯಾಂಡೇಟ್) ಎಂದು ಹೇಗೆ ಹೇಳಲಾಗುತ್ತದೆ? ಈ ರೀತಿ ನ್ಯಾಯಾಲಯವನ್ನು ಅಗೌರವಿಸಲಾಗದು” ಎಂದು ನ್ಯಾಯಾಧೀಶರು ಆಸ್ಪತ್ರೆಯ ವಿರುದ್ಧ ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಕಾಮತ್ ಅವರು, ಕಮಾಂಡ್ ಆಸ್ಪತ್ರೆಯು ತಮ್ಮನ್ನು ಸಂಪರ್ಕಿಸಬೇಕಿತ್ತು ಮತ್ತು ನ್ಯಾಯಾಲಯದೊಡನೆ ಈ ರೀತಿ ನಡೆದುಕೊಳ್ಳಬಾರದು ಎಂದು ಒಪ್ಪಿಕೊಂಡರು.
ಇ.ಡಿ. ಅರ್ಜಿದಾರರ ಮೆಮೊಗೆ ಸಂಬಂಧಿಸಿದಂತೆ ನಿಲುವು ಕೈಗೊಳ್ಳಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಸೈಲ್‌ಗೆ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನನ್ನು ವಿಸ್ತರಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 28ಕ್ಕೆ ಮುಂದೂಡಿದೆ.






