ಬೆಂಗಳೂರು: ಶುದ್ಧ ಸಸ್ಯಾಹಾರಿ (Vegan) ಸ್ಯಾಂಡ್‌ವಿಚ್ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರಿಗೆ ಸೀಗಡಿ(Prawn) ಮಿಶ್ರಿತ ಆಹಾರ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗ್ರಾಹಕ ನ್ಯಾಯಾಲಯವು ಸ್ವಿಗ್ಗಿ(Swiggy) ಹಾಗೂ ಸಂಬಂಧಪಟ್ಟ ಹೋಟೆಲ್‌ಗೆ ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಿದೆ. ಕೇವಲ 145 ರೂ. ಮೌಲ್ಯದ ಸ್ಯಾಂಡ್‌ವಿಚ್‌ಗಾಗಿ ನಡೆದ ಕಾನೂನು ಹೋರಾಟದಲ್ಲಿ ಗ್ರಾಹಕಿ ಗೆದ್ದಿದ್ದು, ಸೇವಾ ನ್ಯೂನತೆಗಾಗಿ ಸಂಸ್ಥೆಗಳು ಭಾರೀ ಬೆಲೆ ತೆರುವಂತಾಗಿದೆ.
ದೂರುದಾರರಾದ ನಿಶಾ ಜಿ(37) ಅವರು ಪ್ರಾಣಿಪ್ರಿಯರಾಗಿದ್ದು, ಸಂಪೂರ್ಣ ಸಸ್ಯಾಹಾರಿಯಾಗಿದ್ದು ವೀಗನ್ ಆಹಾರ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಇವರು ಜುಲೈ 10, 2024 ರಂದು ಸ್ವಿಗ್ಗಿ ಮೂಲಕ ‘ಪ್ಯಾರಿಸ್ ಪಾನಿನಿ’ (Paris Panini) ಹೋಟೆಲ್‌ನಿಂದ ವೀಗನ್ ಸ್ಯಾಂಡ್‌ವಿಚ್ ಆರ್ಡರ್ ಮಾಡಿದ್ದರು. ಆಹಾರ ತಲುಪಿದ ಬಳಿಕ ಅದನ್ನು ಸೇವಿಸಿದಾಗ ರುಚಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶೀಲಿಸಿದಾಗ ಸ್ಯಾಂಡ್‌ವಿಚ್ ಒಳಗೆ ಸೀಗಡಿ ಮೀನಿನ ತುಂಡುಗಳು ಪತ್ತೆಯಾಗಿವೆ. ಇದರಿಂದ ಆಘಾತಗೊಂಡ ನಿಶಾ ಅವರು, ತಾನು ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನೊಂದಿರುವುದಾಗಿ ಆರೋಪಿಸಿದ್ದರು.
ಘಟನೆ ಕುರಿತು ಹೋಟೆಲ್ ಸಂಪರ್ಕಿಸಿದಾಗ, “ಹೆಚ್ಚಿನ ರಶ್ ಇದ್ದಿದ್ದರಿಂದ ಹೀಗಾಗಿದೆ” ಎಂದು ಮ್ಯಾನೇಜರ್ ಸಮಜಾಯಿಷಿ ನೀಡಿದ್ದರು. ಆದರೆ ಕೋರ್ಟ್ ಮೆಟ್ಟಿಲೇರಿದಾಗ ಹೋಟೆಲ್ ಆಡಳಿತ ಮಂಡಳಿ, “ನಾವು ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ನೀಡುತ್ತೇವೆ, ಹೀಗಾಗಿ ಸಾಮಾನ್ಯ ವೀಗನ್ ವ್ಯಕ್ತಿಗಳು ನಮ್ಮ ಹೋಟೆಲ್ ಆಯ್ಕೆ ಮಾಡಿಕೊಳ್ಳುವುದಿಲ್ಲ” ಎಂದು ವಿಚಿತ್ರ ವಾದ ಮಂಡಿಸಿತ್ತು. ಇತ್ತ ಸ್ವಿಗ್ಗಿ, ತಾನು ಕೇವಲ ತಾಂತ್ರಿಕ ಮಧ್ಯವರ್ತಿ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು.
ವಾದ-ಪ್ರತಿವಾದ ಆಲಿಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ಸಸ್ಯಾಹಾರಿಗೆ ಮಾಂಸಾಹಾರ ಪೂರೈಸುವುದು “ಗಂಭೀರ ಸೇವಾ ನ್ಯೂನತೆ” ಎಂದು ಮಹತ್ವದ ತೀರ್ಪು ನೀಡಿದೆ. ಧಾರ್ಮಿಕ, ಸಾಂಸ್ಕೃತಿಕ ಅಥವಾ ಆರೋಗ್ಯದ ಕಾರಣಕ್ಕೆ ಆಹಾರ ಪದ್ಧತಿ ಪಾಲಿಸುವವರಿಗೆ ತಪ್ಪು ಆಹಾರ ನೀಡುವುದನ್ನು ಲಘುವಾಗಿ ಪರಿಗಣಿಸಲಾಗದು ಎಂದಿದೆ. ಅಂತಿಮವಾಗಿ ಸ್ವಿಗ್ಗಿ ಮತ್ತು ಹೋಟೆಲ್ ಜಂಟಿಯಾಗಿ ಪರಿಹಾರದ ರೂಪದಲ್ಲಿ 50,000 ರೂ., ಮಾನಸಿಕ ಕಿರುಕುಳಕ್ಕಾಗಿ 50,000 ರೂ., ಕೋರ್ಟ್ ವೆಚ್ಚಕ್ಕಾಗಿ 5,000 ರೂ. ಹಾಗೂ ಸ್ಯಾಂಡ್‌ವಿಚ್‌ನ ದರ 146 ರೂ.ಗಳನ್ನು ಬಡ್ಡಿ ಸಹಿತ ಗ್ರಾಹಕರಿಗೆ ಪಾವತಿಸುವಂತೆ ಆದೇಶಿಸಿದೆ.






