ಉತ್ತರಕನ್ನಡ: ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಂಜಿನಿಯರ್ ಒಬ್ಬನನ್ನು ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚರಸ್ ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ಸುಭಾಷ್ ನಗರದ ನಿವಾಸಿ ಸಚಿನ್ ಟೇಕಬಹುದ್ದೂರ್ ಗೋರ್ಖಾ (26) ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಮುಂಡಗೋಡ ಬಸ್ ಡಿಪೋ ಸಮೀಪ ಬೈಕ್‌ನಲ್ಲಿ ಕುಳಿತು ಚರಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಂಧಿತನಿಂದ ಸುಮಾರು 8 ಲಕ್ಷ ರೂ. ಮೌಲ್ಯದ 781 ಗ್ರಾಂ ಚರಸ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಮತ್ತು ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ ಮುಧೋಳ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ ಹಾಗೂ ಗುರು ಬಿಶಟ್ಟಪ್ಪನವರ ಪಾಲ್ಗೊಂಡಿದ್ದರು.
ಆರೋಪಿ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸರ ಈ ಮಿಂಚಿನ ಕಾರ್ಯಾಚರಣೆ ಪಟ್ಟಣದಲ್ಲಿ ನಡೆಯುತ್ತಿದ್ದ ಮಾದಕ ವಸ್ತುಗಳ ಅಕ್ರಮ ಜಾಲಕ್ಕೆ ದೊಡ್ಡ ಹೊಡೆತ ನೀಡಿದೆ.






