ಮಂಡ್ಯ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N. Chaluvarayaswamy) ಅವರು ತಮ್ಮ ಪುತ್ರ ಸಚಿನ್ ಚಲುವರಾಯಸ್ವಾಮಿ (Sachin Chaluvarayaswamy) ಅವರ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಲು ‘ಮಾಸ್ಟರ್ ಪ್ಲಾನ್'(Master plan) ರೂಪಿಸಿದ್ದು, ಇಂದು ನಡೆಯಲಿರುವ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ (DCC Bank President) ಸ್ಥಾನಕ್ಕೆ ಸಚಿನ್ ಅವರ ಹೆಸರು ಬಹುತೇಕ ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಗಾದಿ ಕೊಡಿಸುವ ಮೂಲಕ ಪುತ್ರನ ರಾಜಕೀಯ ಬುನಾದಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಚಿವರು ರಣತಂತ್ರ ಹೆಣೆದಿದ್ದಾರೆ.
ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇಂದು (ಶುಕ್ರವಾರ) ಚುನಾವಣೆ ನಡೆಯಲಿದೆ. ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ 11 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಶಾಸಕ ನರೇಂದ್ರಸ್ವಾಮಿ, ಸಚಿನ್ ಚಲುವರಾಯಸ್ವಾಮಿ ಸೇರಿದಂತೆ ಐದಾರು ಮಂದಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಶಾಸಕ ನರೇಂದ್ರಸ್ವಾಮಿ (MLA Narendraswamy) ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇರುವುದರಿಂದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಿಂದ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಉಳಿದ ಆಕಾಂಕ್ಷಿಗಳನ್ನು ಮನವೊಲಿಸಿ, ಯಾವುದೇ ವಿರೋಧವಿಲ್ಲದೆ ಸಚಿನ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಸಚಿವರು ಅಗತ್ಯ ತಯಾರಿ ನಡೆಸಿದ್ದಾರೆ.






