ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಮೇದಾರಗಲ್ಲಿ ಮತ್ತು ಕುಂಬಾರಗಲ್ಲಿಯ ತಾಲಿಮ್ ಕೂಟ್ ಬಳಿ ಯಾವುದೇ ಪರವಾನಿಗೆ ಪಡೆಯದೇ ಟಿಪ್ಪು ಸುಲ್ತಾನ್ ಬ್ಯಾನರ್ ಅಳವಡಿಸಲು ಮುಂದಾದ ಘಟನೆ ನಡೆದಿದ್ದು, ಇದು ವಿವಾದದ ಕಿಡಿ ಹೊತ್ತಿಸಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
ಬಸ್ ನಿಲ್ದಾಣಕ್ಕೆ ಸಾಗುವ ಮುಖ್ಯ ರಸ್ತೆಯಲ್ಲಿರುವ ಮೇದಾರಗಲ್ಲಿ, ಕುಂಬಾರಗಲ್ಲಿ ಮತ್ತು ಗಣಪತಿ ಗಲ್ಲಿ ಕೂಡುವ ತಾಲಿಮ್ ಕೂಟ್‌ನಲ್ಲಿರುವ ವಿದ್ಯುತ್ ಕಂಬಕ್ಕೆ ‘ದಿ ಕಿಂಗ್ ಆಫ್ ಟೈಗರ್’ ಎಂದು ಬರೆದಿದ್ದ ಟಿಪ್ಪು ಸುಲ್ತಾನ್ ಅವರ ದೊಡ್ಡ ಗಾತ್ರದ ಕಟೌಟ್ ಅನ್ನು ಸಾರ್ವಜನಿಕವಾಗಿ ಅಳವಡಿಸಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು, ಕೂಡಲೇ ಇದನ್ನು ತೆರವುಗೊಳಿಸುವಂತೆ ಪುರಸಭೆಗೆ ಮೌಖಿಕ ದೂರು ನೀಡಿದ್ದರು. ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಪುರಸಭೆ ಸಿಬ್ಬಂದಿ, ಅನುಮತಿ ಇಲ್ಲದ ಬ್ಯಾನರ್ ತೆರವುಗೊಳಿಸುವಂತೆ ಸೂಚಿಸಿದರು.
ಈ ವೇಳೆ ಬ್ಯಾನರ್ ತೆಗೆದ ಯುವಕರ ಗುಂಪೊಂದು ಅದನ್ನು ಮನೆಯೊಂದರ ಎದುರು ಅಳವಡಿಸಲು ಮುಂದಾಯಿತು. ಆದರೆ, ಅದಕ್ಕೂ ಪರವಾನಿಗೆ ಅಗತ್ಯ ಎಂದು ಸಿಬ್ಬಂದಿ ತಿಳಿಸಿದಾಗ ವಾಗ್ವಾದ ನಡೆಯಿತು. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಬ್ಯಾನರ್ ಅಳವಡಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದ ಯುವಕರು, ದೂರು ನೀಡಿದವರ ವಿವರ ಕೇಳಿ ಅಧಿಕಾರಿಗಳೊಂದಿಗೆ ಚರ್ಚೆಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪಿಎಸ್‌ಐ ಕೃಷ್ಣಗೌಡ ಅರಕೇರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಸ್ಥಳಕ್ಕೆ ಧಾವಿಸಿದರು. ಸಾರ್ವಜನಿಕ ಸ್ಥಳ ಅಥವಾ ಮನೆಯ ಎದುರು ಬ್ಯಾನರ್ ಹಾಕಲು ಅನುಮತಿ ಕಡ್ಡಾಯ ಎಂದು ಮುಖ್ಯಾಧಿಕಾರಿಗಳು ಸ್ಪಷ್ಟಪಡಿಸಿ, ನಿಯಮಾವಳಿಗಳ ಬಗ್ಗೆ ತಿಳಿಹೇಳಿ ಬ್ಯಾನರ್ ತೆರವುಗೊಳಿಸಿದರು.
ಅಧಿಕಾರಿಗಳ ಸೂಚನೆ ನಡುವೆಯೂ ಬ್ಯಾನರ್‌ಗೆ ಪೂಜೆ ಮಾಡಲು ಅವಕಾಶ ಕೋರಿದ ಯುವಕರು, ಏಕಾಏಕಿ ‘ನಾರೆ ತಕ್ದೀರ್ ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜೈಕಾರ ಕೂಗಿದಾಗ ವಾತಾವರಣ ಉದ್ವಿಗ್ನಗೊಂಡಿತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಕೃಷ್ಣ ಅವರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸದ್ಯ ಪರವಾನಿಗೆ ಪಡೆದು ಬ್ಯಾನರ್ ಹಾಕುತ್ತೇವೆ ಎಂದು ಒಂದು ಗುಂಪು ಪಟ್ಟು ಹಿಡಿದಿದ್ದರೆ, ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.






