ವಿಜಯಪುರ: ಎಳೆನೀರು ಕುಡಿಯಲು ಬಂದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ನಂಬಿಸಿ ಮನೆಗೆ ಕರೆದೊಯ್ದು, ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಹನಿಟ್ರ್ಯಾಪ್ ಪ್ರಕರಣವೊಂದು ಇಂಡಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ನೊಂದ ಮ್ಯಾನೇಜರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯನ್ನು ಸುವರ್ಣ ಎಂದು ಗುರುತಿಸಲಾಗಿದೆ. ಇಂಡಿ ಪಟ್ಟಣದಲ್ಲಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ಈಕೆಯ ಅಂಗಡಿಗೆ ಸ್ಥಳೀಯ ಬ್ಯಾಂಕ್ ಮ್ಯಾನೇಜರ್ ಒಬ್ಬರು ನಿತ್ಯ ಎಳೆನೀರು ಸೇವಿಸಲು ತೆರಳುತ್ತಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಮಹಿಳೆ, ಮ್ಯಾನೇಜರ್ ಜೊತೆ ಸಲುಗೆ ಬೆಳೆಸಿ ಅವರನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಮ್ಯಾನೇಜರ್ ಮನೆಗೆ ತೆರಳಿದ ವೇಳೆ ಇಬ್ಬರೂ ಏಕಾಂತದಲ್ಲಿದ್ದ ಕ್ಷಣಗಳನ್ನು ಮಹಿಳೆಯ ಮಗ ಅಮೂಲ್ ಎಂಬಾತ ಮೊಬೈಲ್‌ನಲ್ಲಿ ಗುಪ್ತವಾಗಿ ರೆಕಾರ್ಡ್ ಮಾಡಿಕೊಂಡಿದ್ದಾಗಿ ಆರೋಪಿಸಲಾಗಿದೆ.
ಬಳಿಕ ಈ ಹನಿಟ್ರ್ಯಾಪ್ ಜಾಲಕ್ಕೆ ಹೋಮ್‌ಗಾರ್ಡ್ ತೌಶಿಪ್ ಕರೋಶಿ ಹಾಗೂ ನಕಲಿ ಪತ್ರಕರ್ತ ಮಹೇಶ್ ಎಂಬುವವರು ಸಾಥ್ ನೀಡಿದ್ದಾರೆ. ಮ್ಯಾನೇಜರ್ ಅವರ ಖಾಸಗಿ ವಿಡಿಯೋವನ್ನು ಮುಂದಿಟ್ಟುಕೊಂಡು, 25 ಲಕ್ಷ ರೂ. ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮಾನಕ್ಕೆ ಹೆದರಿದ ಮ್ಯಾನೇಜರ್ 4 ಲಕ್ಷ ರೂ. ನೀಡಲು ಮುಂದಾಗಿದ್ದರೂ, ಆರೋಪಿಗಳು ಕನಿಷ್ಠ 10 ಲಕ್ಷ ರೂ. ನೀಡಲೇಬೇಕೆಂದು ಪಟ್ಟು ಹಿಡಿದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ.
ಬ್ಲಾಕ್‌ಮೇಲ್ ಕಿರುಕುಳ ತಾಳಲಾರದೆ ಅಂತಿಮವಾಗಿ ಬ್ಯಾಂಕ್ ಮ್ಯಾನೇಜರ್ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಜಾಲವು ಇದೇ ಮಾದರಿಯಲ್ಲಿ ಹಲವರನ್ನು ಹನಿಟ್ರ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.






