ಬೆಂಗಳೂರು: ನಗರದಲ್ಲಿ ಬುಧವಾರ (ನ.19)ರಂದು ನಡೆದಿದ್ದ 7.11 ರೂಪಾಯಿ ಮೌಲ್ಯದ ಎಟಿಎಂ ನಗದು ವ್ಯಾನ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಅತ್ಯಂತ ಯೋಜಿತವಾಗಿ ನಡೆದಿದ್ದ ಈ ದರೋಡೆಯ ಜಾಡು ಹಿಡಿದ ಪೊಲೀಸರು, ಕೇವಲ 60 ಗಂಟೆಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 5.76 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ನವೆಂಬರ್ 19ರಂದು ಮಧ್ಯಾಹ್ನ ಅಶೋಕ ಪಿಲ್ಲರ್ ಮತ್ತು ಡೇರಿ ಸರ್ಕಲ್ ಮಾರ್ಗದಲ್ಲಿ 7.11 ಕೋಟಿ ರೂ. ಹಣ ಸಾಗಿಸುತ್ತಿದ್ದ ಸಿಎಂಎಸ್ ವ್ಯಾನ್ ಅನ್ನು ಅಡ್ಡಗಟ್ಟಿದ್ದ ದರೋಡೆಕೋರರು, ತಾವು ಆರ್‌ಬಿಐ (RBI) ಅಧಿಕಾರಿಗಳೆಂದು ಹೇಳಿಕೊಂಡಿದ್ದರು. ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರ ತೋರಿಸಿ ಬೆದರಿಸಿ ವಾಹನವನ್ನು ಅಪಹರಿಸಿ, ನಂತರ ಹಣದ ಪೆಟ್ಟಿಗೆಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರಿಗೆ ಸವಾಲಾಗಿದ್ದ ಪ್ರಕರಣ:
ಇದೊಂದು ಪಕ್ಕಾ ಸ್ಕೆಚ್ ಹಾಕಿ ನಡೆಸಿದ ಕೃತ್ಯವಾಗಿತ್ತು. ಆರೋಪಿಗಳು ಸಿಸಿಟಿವಿ ಕಣ್ಗಾವಲು ಇಲ್ಲದ ಜಾಗಗಳನ್ನೇ ಆಯ್ಕೆ ಮಾಡಿಕೊಂಡಿದ್ದರು ಮತ್ತು ಕಾರ್ಯಾಚರಣೆಯ ವೇಳೆ ಮೊಬೈಲ್ ಫೋನ್ ಬಳಸದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದರು. ತನಿಖೆಯ ದಿಕ್ಕು ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುವುದು, ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುವುದು ಸೇರಿದಂತೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಎಚ್ಚರ ವಹಿಸಿದ್ದರು. ಅಲ್ಲದೆ, ದರೋಡೆ ಮಾಡಲಾದ ನೋಟುಗಳ ಸೀರಿಯಲ್ ನಂಬರ್ ದಾಖಲೆ ಇಲ್ಲದಿದ್ದದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
11 ಇನ್ಸಪೆಕ್ಟರ್, 2 ಎಸಿಪಿ ನೇತೃತ್ವದ ಕಾರ್ಯಾಚರಣೆ
ಈ ಸವಾಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗ ಹಾಗೂ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಸುಮಾರು 11 ಜನ ಇನ್ಸ್‌ಪೆಕ್ಟರ್‌ಗಳು, ಇಬ್ಬರು ಎಸಿಪಿಗಳು ಸೇರಿದಂತೆ ಪ್ರಬಲ ತಂಡವು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾಗೂ ತೆರಳಿ ಶೋಧ ನಡೆಸಿತ್ತು. ಸುಮಾರು 30ಕ್ಕೂ ಹೆಚ್ಚು ಶಂಕಿತರ ವಿಚಾರಣೆ ನಡೆಸಿ, ಕೃತ್ಯ ನಡೆದ 54 ಗಂಟೆಯಲ್ಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ದರೋಡೆಯಲ್ಲಿ ಒಟ್ಟು 6 ರಿಂದ 8 ಜನರ ಗುಂಪು ಭಾಗಿಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.






