ದಾವಣಗೆರೆ: ಜೆಡಿಎಸ್ ಮುಖಂಡನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯ ವೇಳೆ ಜೆಡಿಎಸ್ ಮುಖಂಡ ಅಸ್ಗರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಕಾಂಗ್ರೆಸ್ ನಾಯಕಿಯ ಕೈವಾಡವಿರುವುದು ಬೆಳಕಿಗೆ ಬಂದಿದೆ.
ಅಸ್ಗರ್ ಹಾಗೂ ಖಾಲೀದ್ ಪೈಲ್ವಾನ್ ನಡುವೆ ಹಳೆಯ ಹಣಕಾಸಿನ ವೈಷಮ್ಯವಿತ್ತು ಎನ್ನಲಾಗಿದೆ. ಈ ದ್ವೇಷದ ಹಿನ್ನೆಲೆಯಲ್ಲಿ ಖಾಲೀದ್, ಅಸ್ಗರ್ ಮೇಲೆ ಹಲ್ಲೆ ನಡೆಸಿದ್ದನು. ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿಯಾದ ಖಾಲೀದ್ ಪೈಲ್ವಾನ್‍ಗೆ ಸವಿತಾ ನಾಯ್ಕ್ ಅವರು ಆಶ್ರಯ ನೀಡಿದ್ದಲ್ಲದೆ, ತಲೆಮರೆಸಿಕೊಳ್ಳಲು ಹಣಕಾಸಿನ ನೆರವು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿಗಳಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ಸವಿತಾ ಮಲ್ಲೇಶ್ ನಾಯ್ಕ್ ಅವರನ್ನು ಬಂಧಿಸಲಾಗಿದೆ.
ಸವಿತಾ ನಾಯ್ಕ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಚುನಾವಣೆ ಮುಗಿದ ಬಳಿಕ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಕೊಲೆ ಯತ್ನ ಪ್ರಕರಣದ ಆರೋಪಿಗೆ ಸಹಕರಿಸಿದ ಆರೋಪದಡಿ ಜೈಲು ಸೇರುವಂತಾಗಿದೆ.






