ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ (ಗ್ರೂಪ್ ಬಿ) ಬಡ್ತಿ ನೀಡುವ ಸಂಬಂಧ ಆನ್‌ಲೈನ್ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರು ಅಥವಾ ಉಪಪ್ರಾಂಶುಪಾಲರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲು ಈ ಪ್ರಕ್ರಿಯೆ ನಡೆಯಲಿದೆ.
ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಹೊರಡಿಸಿರುವ ಆದೇಶದ ಪ್ರಕಾರ, ಮೈಸೂರು ವಿಭಾಗದ ಶಿಕ್ಷಕರಿಗೆ ಡಿಸೆಂಬರ್ 10, 2025 ರಂದು ಬೆಳಿಗ್ಗೆ 10 ಗಂಟೆಗೆ ಹಾಗೂ ಬೆಂಗಳೂರು ವಿಭಾಗದ ಶಿಕ್ಷಕರಿಗೆ ಡಿಸೆಂಬರ್ 11, 2025 ರಂದು ಬೆಳಿಗ್ಗೆ 10 ಗಂಟೆಗೆ ಕೌನ್ಸಿಲಿಂಗ್ ನಿಗದಿಪಡಿಸಲಾಗಿದೆ. ಅರ್ಹ ಶಿಕ್ಷಕರು ಆಯಾ ಉಪನಿರ್ದೇಶಕರ (ಆಡಳಿತ) ಕಚೇರಿಗೆ ಹಾಜರಾಗಿ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಬೇಕಿದೆ.
ಕೌನ್ಸಿಲಿಂಗ್‌ಗೆ ಹಾಜರಾಗುವ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಡಿಸೆಂಬರ್ 06, 2025 ರಂದು ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಸಂಬಂಧಪಟ್ಟ ಶಿಕ್ಷಕರು ನಿಗದಿತ ಸಮಯದಲ್ಲಿ ಹಾಜರಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು (ಆಡಳಿತ) ವಿಜಯ ರವಿಕುಮಾರ್ ಅವರು ಬೆಂಗಳೂರು ಹಾಗೂ ಮೈಸೂರು ವಿಭಾಗದ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.







