ನವದೆಹಲಿ: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು(Labour Codes) ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ದಶಕಗಳಷ್ಟು ಹಳೆಯದಾದ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಹೊಸ ನಿಯಮಗಳಲ್ಲಿ ಉದ್ಯೋಗಿಗಳ ಹಿತರಕ್ಷಣೆ, ಸಾಮಾಜಿಕ ಭದ್ರತೆ ಹಾಗೂ ಮಹಿಳಾ ಉದ್ಯೋಗಿಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಹೊಸ ನಿಯಮದ ಅನ್ವಯ, ನಿಗದಿತ ಅವಧಿಯ ಉದ್ಯೋಗಿಗಳಿಗೆ (Fixed-term employees) ಇನ್ಮುಂದೆ ನಿರಂತರ ಒಂದು ವರ್ಷ ಸೇವೆ ಸಲ್ಲಿಸಿದರೆ ಸಾಕು, ಅವರು ಗ್ರಾಚ್ಯುಟಿ ಪಡೆಯಲು ಅರ್ಹರಾಗುತ್ತಾರೆ. ಈ ಹಿಂದೆ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಗ್ರಾಚ್ಯುಟಿ ಸೌಲಭ್ಯವಿತ್ತು. ಅಲ್ಲದೆ, ರಾಷ್ಟ್ರೀಯ ಕನಿಷ್ಠ ವೇತನವು ಇನ್ಮುಂದೆ ಕೇವಲ ನಿರ್ದಿಷ್ಟ ಕೈಗಾರಿಕೆಗಳಿಗೆ ಸೀಮಿತವಾಗಿರದೇ, ಎಲ್ಲಾ ವಲಯದ ಕಾರ್ಮಿಕರಿಗೂ ಅನ್ವಯವಾಗಲಿದೆ. ಯಾವುದೇ ಉದ್ಯೋಗಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ನೇಮಕಾತಿ ಪತ್ರ (Appointment letter) ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಐಟಿ ಕಂಪನಿಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಪ್ರತಿ ತಿಂಗಳ 7ನೇ ತಾರೀಖಿನೊಳಗೆ ಉದ್ಯೋಗಿಗಳಿಗೆ ವೇತನ ಪಾವತಿಸಬೇಕೆಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ಮೊದಲ ಬಾರಿಗೆ ‘ಗಿಗ್ ಮತ್ತು ಪ್ಲಾಟ್‌ಫಾರ್ಮ್’ (Gig workers) ಕಾರ್ಮಿಕರನ್ನು ಕಾನೂನಾತ್ಮಕವಾಗಿ ವ್ಯಾಖ್ಯಾನಿಸಲಾಗಿದೆ. ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿದ್ದು ಕೆಲಸ ಮಾಡುವವರನ್ನೂ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರಲಾಗಿದೆ. ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ, 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಉದ್ಯೋಗದಾತರು ಕಡ್ಡಾಯವಾಗಿ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯವನ್ನು ನೀಡಬೇಕಿದೆ. ಅಲ್ಲದೆ, ಅಪಾಯಕಾರಿ ಪ್ರಕ್ರಿಯೆಗಳಲ್ಲಿ ತೊಡಗಿರುವ ಸಂಸ್ಥೆಯಲ್ಲಿ ಕೇವಲ ಒಬ್ಬ ಉದ್ಯೋಗಿ ಇದ್ದರೂ ಕಡ್ಡಾಯವಾಗಿ ಇಎಸ್ಐಸಿ(ESIC) ನೋಂದಣಿ ಮಾಡಿಸಬೇಕಿದ್ದು, ಈ ಸೌಲಭ್ಯ ದೇಶಾದ್ಯಂತ ಲಭ್ಯವಾಗಲಿದೆ.
ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ನಿಯಮಗಳನ್ನು ಸರಳಗೊಳಿಸಲಾಗಿದೆ. ಇನ್ಮುಂದೆ ಮಹಿಳೆಯರು ತಮ್ಮ ಸಮ್ಮತಿಯ ಮೇರೆಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಹಾಗೂ ಗಣಿಗಾರಿಕೆಯಂತಹ ಅಪಾಯಕಾರಿ ವಲಯಗಳಲ್ಲಿಯೂ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ. ಈ ಸುಧಾರಣೆಗಳು ಕಂಪನಿಗಳಿಗೆ ನೇಮಕಾತಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡುವ ಜೊತೆಗೆ, ಕಾರ್ಮಿಕರಿಗೆ ಹೊಸ ಸುರಕ್ಷತಾ ಮಾನದಂಡಗಳನ್ನು ಒದಗಿಸಲಿದೆ.






