ಹುಬ್ಬಳ್ಳಿ: ಇಲ್ಲಿನ ರೈಲ್ ಸೌಧದಲ್ಲಿ ನಡೆದ ನೈರುತ್ಯ ರೈಲ್ವೆ ವಲಯದ (SWR) ಪಟ್ಟಣ ಅಧಿಕೃತ ಭಾಷಾ ಅನುಷ್ಠಾನ ಸಮಿತಿಯ (TOLIC) 78ನೇ ಸಭೆ ಈಗ ಭಾಷಾ ವಿವಾದದ ಕೇಂದ್ರಬಿಂದುವಾಗಿದೆ.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೇದಿಕೆಯ ಮೇಲಿದ್ದ ಬ್ಯಾನರ್‌ನಲ್ಲಿ ಕನ್ನಡವನ್ನು ಕಡೆಗಣಿಸಿರುವುದಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ನಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದ್ದು, ಸ್ಥಳೀಯ ಭಾಷೆಯಾದ ಕನ್ನಡ ಎಲ್ಲಿಯೂ ಕಾಣುತ್ತಿಲ್ಲ ಎಂಬುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
“ಇದು ಕರ್ನಾಟಕ, ಇಲ್ಲಿನ ಅಧಿಕೃತ ಭಾಷೆ ಕನ್ನಡವಾಗಿರುವಾಗ, ಪಟ್ಟಣ ಅಧಿಕೃತ ಭಾಷಾ ಸಮಿತಿ ಸಭೆಯಲ್ಲಿ ಕನ್ನಡವನ್ನೇ ಕೈಬಿಟ್ಟಿರುವುದು ಎಷ್ಟು ಸರಿ?” ಎಂದು ಸಾಮಾಜಿಕ ಜಾಲತಾಣ ಎಕ್ಸ್ (X) ಬಳಕೆದಾರರು ಪ್ರಶ್ನಿಸಿದ್ದಾರೆ. ಇದನ್ನು ನೇರವಾಗಿ “ಹಿಂದಿ ಹೇರಿಕೆ” (Hindi Imposition) ಎಂದು ಕರೆದಿರುವ ಅವರು, ರೈಲ್ವೆ ಇಲಾಖೆಯ ಇಂತಹ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಟ್ಯಾಗ್ ಮಾಡಿರುವ ಬಳಕೆದಾರರು, ರಾಷ್ಟ್ರೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಂದಿಯನ್ನು ಹೇರಿಕೆ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. “ನಿಮ್ಮ ಹಿಂದಿ ಹೇರಿಕೆಯನ್ನು ನಿಲ್ಲಿಸಿ ಮತ್ತು ಇದನ್ನು ಪಟ್ಟಣದ ಅಧಿಕೃತ ಭಾಷೆ ಎಂದು ಕರೆಯುವುದನ್ನು ನಿಲ್ಲಿಸಿ. ಪೋಸ್ಟರ್‌ನಲ್ಲಿ ಕನ್ನಡ ಏಕಿಲ್ಲ?” ಎಂದು ಪ್ರಶ್ನಿಸುವ ಮೂಲಕ ರೈಲ್ವೆ ಇಲಾಖೆಯ ನಡೆಗೆ ಛೀಮಾರಿ ಹಾಕಿದ್ದಾರೆ. ಕರ್ನಾಟಕದಲ್ಲಿರುವ ಕೇಂದ್ರ ಕಚೇರಿಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಕೂಗು ಈ ಘಟನೆಯ ಮೂಲಕ ಮತ್ತೊಮ್ಮೆ ಬಲವಾಗಿ ಕೇಳಿಬಂದಿದೆ.






