ಕುಮಟಾ: ತಾಲ್ಲೂಕಿನ ಗೋಕರ್ಣದ ಪ್ರಸಿದ್ಧ ಪ್ರವಾಸಿ ತಾಣ ಓಂ ಬೀಚ್‌ನಲ್ಲಿ ಸಮುದ್ರಕ್ಕಿಳಿದು ಅಲೆಗಳ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಸಾಗರ ಮೂಲದ ಪ್ರವಾಸಿಗನೊಬ್ಬನನ್ನು ಲೈಫ್‌ಗಾರ್ಡ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ರಕ್ಷಿಸಲ್ಪಟ್ಟವರನ್ನು ಸಾಗರ ಮೂಲದ ವರುಣ್(23) ಎಂದು ಗುರುತಿಸಲಾಗಿದೆ. ವರುಣ್ ಸೇರಿದಂತೆ ಮೂವರು ಸ್ನೇಹಿತರು ಬ್ಯಾಂಕ್ ಕೆಲಸದ ನಿಮಿತ್ತ ಗೋಕರ್ಣಕ್ಕೆ ಬಂದಿದ್ದರು. ಕೆಲಸ ಮುಗಿಸಿ ಸಂಜೆ ವೇಳೆ ಓಂ ಬೀಚ್‌ಗೆ ತೆರಳಿದ್ದ ಇವರು, ಸಮುದ್ರದಲ್ಲಿ ಈಜಾಡುತ್ತಿದ್ದಾಗ ವರುಣ್ ಅವರು ಹಠಾತ್ತನೆ ಅಲೆಗಳ ರಭಸಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದರು.
ಇದನ್ನು ತಕ್ಷಣ ಗಮನಿಸಿದ ಜೀವರಕ್ಷಕ ಸಿಬ್ಬಂದಿಗಳಾದ ಮಂಜೇಶ ಹರಿಕಂತ್ರ ಮತ್ತು ಪ್ರಭಾಕರ ಅಂಬಿಗ ಅವರು, ಸ್ಥಳೀಯರ ಸಹಕಾರದೊಂದಿಗೆ ಕೂಡಲೇ ಕಾರ್ಯಾಚರಣೆ ನಡೆಸಿ ಯುವಕನನ್ನು ದಡಕ್ಕೆ ತಂದಿದ್ದಾರೆ. ನಂತರ ಖಾಸಗಿ ಆಂಬುಲೆನ್ಸ್ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಅಲ್ಲಿ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಅವರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.






