ದುಬೈ: ದುಬೈ ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಭಾರತೀಯ ವಾಯುಪಡೆಯ ತೇಜಸ್ ಲಘು ಯುದ್ಧ ವಿಮಾನ (LCA Mk-1) ಪತನಗೊಂಡು, ವಿಮಾನದಲ್ಲಿದ್ದ ಪೈಲಟ್ ವಿಂಗ್ ಕಮಾಂಡರ್ ನಮಾನ್ಶ್ ಸಿಯಾಲ್ (37) ಅವರು ಹುತಾತ್ಮರಾಗಿದ್ದಾರೆ. ಶುಕ್ರವಾರ ಏರ್ ಶೋನ ಅಂತಿಮ ದಿನದಂದು ಆಕಾಶದಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದಾಗ ವಿಮಾನವು ನಿಯಂತ್ರಣ ಕಳೆದುಕೊಂಡು ನೆಲಕ್ಕಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಖಚಿತಪಡಿಸಿದೆ.
ಈ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಐಎಎಫ್, ಮೃತ ಅಧಿಕಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. 2016ರಲ್ಲಿ ತೇಜಸ್ ಯುದ್ಧ ವಿಮಾನ ವಾಯುಪಡೆಗೆ ಸೇರ್ಪಡೆಯಾದ ನಂತರ ಸಂಭವಿಸಿದ ಎರಡನೇ ಪತನ ಇದಾಗಿದೆ. ಇದಕ್ಕೂ ಮುನ್ನ 2024ರ ಮಾರ್ಚ್‌ನಲ್ಲಿ ಜೈಸಲ್ಮೇರ್ ಬಳಿ ತೇಜಸ್ ಪತನಗೊಂಡಿತ್ತಾದರೂ, ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.
ವಿಂಗ್ ಕಮಾಂಡರ್ ನಮಾನ್ಶ್ ಸಿಯಾಲ್
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರಾದ ವಿಂಗ್ ಕಮಾಂಡರ್ ನಮಾನ್ಶ್ ಸಿಯಾಲ್, ಸುಜನ್‍ಪುರ ತಿರಾದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. 2009ರ ಡಿಸೆಂಬರ್ 24ರಂದು ಅವರು ವಾಯುಪಡೆಗೆ ನಿಯೋಜನೆಗೊಂಡಿದ್ದರು. ಮೃತ ನಮಾನ್ಶ್ ಅವರಿಗೆ ಪತ್ನಿ ಹಾಗೂ 6 ವರ್ಷದ ಮಗಳಿದ್ದಾರೆ. ವಿಶೇಷವೆಂದರೆ ಇವರ ಪತ್ನಿ ಕೂಡ ವಾಯುಪಡೆಯ ಅಧಿಕಾರಿಯಾಗಿದ್ದು, ಪ್ರಸ್ತುತ ಕೋಲ್ಕತ್ತಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ತಂದೆ ಜಗನ್ನಾಥ್ ಸಿಯಾಲ್ ಕೂಡ ಸೇನೆಯ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನಮಾನ್ಶ್ ಸಿಯಾಲ್ ಅವರ ಅಗಲಿಕೆಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಾಗೂ ಮಾಜಿ ಸಿಎಂ ಜೈರಾಮ್ ಠಾಕೂರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ದೇಶ ಒಬ್ಬ ಧೈರ್ಯಶಾಲಿ, ಕರ್ತವ್ಯನಿಷ್ಠ ಪೈಲಟ್ ಅನ್ನು ಕಳೆದುಕೊಂಡಿದೆ” ಎಂದು ಸಿಎಂ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ. ನವೆಂಬರ್ 17 ರಂದು ಪ್ರಾರಂಭವಾಗಿದ್ದ ದುಬೈ ಏರ್ ಶೋನಲ್ಲಿ 150ಕ್ಕೂ ಹೆಚ್ಚು ದೇಶಗಳು ಭಾಗವಹಿದ್ದವು, ಅಂತಿಮ ದಿನದಂದು ಈ ದುರ್ಘಟನೆ ಸಂಭವಿಸಿದೆ.






