ಇಂಫಾಲ್: ಜಗತ್ತಿನ ಅಸ್ತಿತ್ವಕ್ಕೆ ಹಿಂದೂ ಸಮಾಜವೇ ಕೇಂದ್ರಬಿಂದುವಾಗಿದ್ದು, “ಹಿಂದೂಗಳಿಲ್ಲದೆ ಈ ಜಗತ್ತು ಉಳಿಯಲು ಸಾಧ್ಯವಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಮಣಿಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ರೀಸ್ (ಯೂನಾನ್), ಈಜಿಪ್ಟ್ (ಮಿಸ್ರ್) ಮತ್ತು ರೋಮ್‌ನಂತಹ ಬಲಿಷ್ಠ ನಾಗರಿಕತೆಗಳು ಕಾಲಕ್ರಮೇಣ ನಾಶವಾಗಿವೆ. ಆದರೆ ಭಾರತೀಯ ನಾಗರಿಕತೆ ಇಂದಿಗೂ ಜೀವಂತವಾಗಿದೆ. ನಮ್ಮ ನಾಗರಿಕತೆಯಲ್ಲಿ ಏನೋ ವಿಶೇಷವಿರುವುದರಿಂದಲೇ ನಾವಿನ್ನೂ ಇಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನಾಂಗೀಯ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿರುವ ಭಾಗವತ್, ಭಾರತ ಎಂಬುದು ಅಮರ ನಾಗರಿಕತೆಯ ಹೆಸರು ಎಂದರು. ನಾವು ಸಮಾಜದಲ್ಲಿ ಎಂತಹ ಜಾಲವನ್ನು ನಿರ್ಮಿಸಿದ್ದೇವೆಂದರೆ ಹಿಂದೂ ಸಮುದಾಯ ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲವಾದರೆ, ಜಗತ್ತು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು. ಇದೇ ವೇಳೆ ಭಾರತದಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಒಂದೇ ಪೂರ್ವಜರ ಸಂತತಿಯವರು, ಇಲ್ಲಿ ಯಾರೂ ಹಿಂದೂಗಳಲ್ಲದವರಿಲ್ಲ ಎಂದು ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದರು.
ರಾಷ್ಟ್ರ ನಿರ್ಮಾಣಕ್ಕೆ ಆರ್ಥಿಕ ಸ್ವಾವಲಂಬನೆ ಅತ್ಯಗತ್ಯ ಎಂದು ಪ್ರತಿಪಾದಿಸಿದ ಭಾಗವತ್, ದೇಶದ ಬಲವರ್ಧನೆಗೆ ಆರ್ಥಿಕತೆಯ ಜೊತೆಗೆ ಸೇನಾ ಸಾಮರ್ಥ್ಯ ಮತ್ತು ಜ್ಞಾನದ ಅಗತ್ಯವಿದೆ ಎಂದರು. ಅಮೆರಿಕದಂತಹ ದೇಶಗಳು ಆಮದು ಸುಂಕ ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ನಮ್ಮ ಆರ್ಥಿಕತೆ ಸಂಪೂರ್ಣ ಸ್ವಾವಲಂಬಿಯಾಗಬೇಕು. ನಾವು ಯಾರ ಮೇಲೂ ಅವಲಂಬಿತರಾಗಬಾರದು ಎಂದು ‘ಸ್ವದೇಶಿ’ ಮಂತ್ರವನ್ನು ಜಪಿಸಿದರು.
ಸಮಾಜದ ದೃಢ ನಿರ್ಧಾರದಿಂದ ಎಂತಹ ಕಠಿಣ ಸಮಸ್ಯೆಗಳನ್ನಾದರೂ ಬಗೆಹರಿಸಬಹುದು ಎಂಬುದಕ್ಕೆ ನಕ್ಸಲಿಸಂನ ಅವನತಿಯೇ ಸಾಕ್ಷಿ ಎಂದರು. ಸಮಾಜವು ಇನ್ನು ಮುಂದೆ ನಕ್ಸಲಿಸಂ ಅನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದಾಗ ಅದು ಅಂತ್ಯವಾಯಿತು. ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗುತ್ತಿರಲಿಲ್ಲ, ಆದರೆ ಭಾರತೀಯರ 90 ವರ್ಷಗಳ ನಿರಂತರ ಹೋರಾಟದ ಫಲವಾಗಿ ಇಲ್ಲಿ ಅವರ ಸೂರ್ಯ ಮುಳುಗಲೇಬೇಕಾಯಿತು ಎಂದು ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ಅವರು ನೀಡಿದರು.






