ಕುಮಟಾ: ಕೊಂಕಣ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕುಮಟಾದ ಯುವಕನೊಬ್ಬನಿಂದ ಬರೋಬ್ಬರಿ 6,46,602 ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಮುಂಬೈ ಮೂಲದ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಂಚನೆಗೊಳಗಾದ ಯುವಕನನ್ನು ಕುಮಟಾದ ಸಂತೋಷ್ ಪ್ರಭಾಕರ್ ಶೇಟ್ ಎಂದು ಗುರುತಿಸಲಾಗಿದೆ. ಮುಂಬೈ ನಿವಾಸಿಯಾಗಿರುವ ಅಮಯ್ ಚಂದ್ರಕಾಂತ ಆಮ್ರೆ ಎಂಬಾತ ಈ ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ಅಮಯ್ ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿ ಹಾಗೂ ರೈಲ್ವೆ ಯೂನಿಯನ್‌ನ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಸಂತೋಷ್‌ಗೆ ಸುಳ್ಳು ಹೇಳಿದ್ದನು.
ಕೊಂಕಣ ರೈಲ್ವೆಯಲ್ಲಿ ಜ್ಯೂನಿಯರ್ ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗೆ ಉದ್ಯೋಗ ಕೊಡಿಸಲು ಯೂನಿಯನ್‌ದವರೊಂದಿಗೆ ಮಾತನಾಡಿ 6.5 ಲಕ್ಷ ರೂ. ನೀಡುವಂತೆ ಆಮಿಷವೊಡ್ಡಿದ್ದನು. ಇದನ್ನು ನಂಬಿದ ಸಂತೋಷ್, ಹಂತ ಹಂತವಾಗಿ ಒಟ್ಟು 6,46,602 ರೂಪಾಯಿಗಳನ್ನು ಆರೋಪಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.
ಹಣ ಪಡೆದ ನಂತರ, ಆರೋಪಿಯು ನಕಲಿ ಕೊಂಕಣ ರೈಲ್ವೆ ಲೆಟರ್‌ಹೆಡ್‌ನಲ್ಲಿ ಕಾಲ್‌ಫರ್ ಲೆಟರ್, ಪರೀಕ್ಷೆಯ ವಿವರಗಳು ಮತ್ತು ವೆರಿಫಿಕೇಶನ್ ಲೆಟರ್‌ಗಳ ನಕಲಿ ಪ್ರತಿಗಳನ್ನು ನೀಡಿದ್ದನು. ಆದರೆ, ನಿಗದಿತ ಸಮಯದೊಳಗೆ ಯಾವುದೇ ನೌಕರಿಯನ್ನು ಕೊಡಿಸದೇ, ಹಣವನ್ನೂ ಸಹ ಹಿಂದಿರುಗಿಸದೇ, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಈ ಕುರಿತು ಸಂತೋಷ್ ಅವರು ನೀಡಿರುವ ದೂರಿನನ್ವಯ ಕುಮಟಾ ಠಾಣೆಯಲ್ಲಿ ಗುನ್ನಾ ಸಂಖ್ಯೆ 194/2025 ರಡಿಯಲ್ಲಿ ಕಲಂ 318(4) ಮತ್ತು 319(2) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






