ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ‘ಅಂಕೋಲಾ ಉತ್ತರ ಕನ್ನಡ ಉಳಿಸಿ’ ಹಾಗೂ ಬಂದರು ವಿರೋಧಿ ಹೋರಾಟ ಸಮಿತಿಯು ನಾಳೆ(ನ.25) ಮಂಗಳವಾರದಂದು ಪಟ್ಟಣದಲ್ಲಿ ‘ಕರಾಳ ದಿನಾಚರಣೆ’ ಹಾಗೂ ಅಂಕೋಲಾ ಬಂದ್‌ಗೆ ಕರೆ ನೀಡಿದೆ.
ಈ ಕುರಿತು ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವ ಹೋರಾಟಗಾರರು, ಕಳೆದ ನವೆಂಬರ್ 12 ರಿಂದ ಆರಂಭಿಸಲಾದ ಧರಣಿ ಸತ್ಯಾಗ್ರಹಕ್ಕೆ ಈವರೆಗೂ ಜಿಲ್ಲಾಡಳಿತವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ತಲುಪಿಸಿ, ಸ್ಥಳಕ್ಕೆ ಬರುವಂತೆ ಆಗ್ರಹಿಸಲಾಗಿತ್ತು. ಆದರೆ, ಯಾರೊಬ್ಬರೂ ಇತ್ತ ಗಮನ ಹರಿಸದಿರುವುದು ಮತ್ತು ಜನರ ಸಮಸ್ಯೆ ಆಲಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ (ನ.25) ಸಾಮೂಹಿಕ ನಾಯಕತ್ವದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಅಣಕು ಶವ ಯಾತ್ರೆ ನಡೆಸುವ ಮೂಲಕ ಕರಾಳ ದಿನಾಚರಣೆಯನ್ನು ಆಚರಿಸಲಾಗುವುದು. ಅಲ್ಲದೆ, ಅಂಕೋಲಾ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸುವಂತೆ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 11:30 ರ ವೇಳೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದು ಪ್ರತಿಭಟನಾ ಸ್ಥಳಕ್ಕೆ ಹಾಜರಾಗಿ ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ತಪ್ಪಿದಲ್ಲಿ, ನಾವು ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.






