ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನಡುವಿನ ಅಧಿಕಾರ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ, ಸಿಎಂ ಪಟ್ಟಕ್ಕೇರಲು ಡಿಕೆಶಿ ಹೊಸ ‘ಆಪರೇಷನ್ ಗದ್ದುಗೆ’ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಡಿಕೆಶಿ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಎದುರುಗೊಳ್ಳದೆ, ಸಿಎಂನ ಅತ್ಯಾಪ್ತ ಹಿರಿಯ ನಾಯಕರ ಮೂಲಕವೇ ಸಂದೇಶ ರವಾನೆ ಮಾಡುವ ತಂತ್ರಕ್ಕೆ ಮುಂದಾಗಿದ್ದಾರೆ.
ಕಳೆದ ರಾತ್ರಿ ಡಿಸಿಎಂ ಡಿಕೆಶಿ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ಸಚಿವ ಕೆ.ಜೆ. ಜಾರ್ಜ್ (K.J. George) ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಜಾರ್ಜ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ ಡಿಕೆಶಿ, ‘ಒಪ್ಪಂದದ ಪ್ರಕಾರ ಸಿಎಂ ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಿಗೆ ತಿಳಿ ಹೇಳಿ,’ ಎಂದು ಕೋರಿ ಜಾರ್ಜ್ ಮುಖಾಂತರ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಡಿಕೆಶಿ ಅವರು ಪಕ್ಷ ಮತ್ತು ಅಧಿಕಾರಕ್ಕಾಗಿ ತಾವು ಪಟ್ಟ ಕಷ್ಟ ಮತ್ತು ಮಾಡಿದ ತ್ಯಾಗಗಳ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಅವರ ಮನವಿಯ ಕುರಿತು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುವುದಾಗಿ ಜಾರ್ಜ್ ಭರವಸೆ ನೀಡಿದ್ದಾರೆ. ಆದರೆ, ಜಾರ್ಜ್ ಅವರು ಡಿಕೆಶಿಗೆ ಸಮಾಧಾನ ಹೇಳಿದರೂ, “ಸಿಎಂ ಸಿದ್ದರಾಮಯ್ಯ ಅವರು ಸದ್ಯಕ್ಕೆ ಸ್ಥಾನ ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಇಲ್ಲ,” ಎಂದು ಹೇಳಿರುವ ಮಾಹಿತಿ ಲಭ್ಯವಾಗಿದೆ.
ಡಿಕೆಶಿ ಅವರು ಒಂದೊಂದೇ ದಾಳ ಉರುಳಿಸುತ್ತಾ ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗಿಸಿರುವ ಈ ‘ಆಪರೇಷನ್ ಗದ್ದುಗೆ’ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.






