ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನ್ಯಾ. ಸೂರ್ಯಕಾಂತ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಹರಿಯಾಣ ಮೂಲದವರಾದ ನ್ಯಾ. ಸೂರ್ಯಕಾಂತ್ ಅವರು, ನಿರ್ಗಮಿತ ಸಿಜೆಐ ಬಿ.ಆರ್. ಗವಾಯಿ (B.R. Gavai) ಅವರ ಅಧಿಕಾರಾವಧಿ ನವೆಂಬರ್ 23 ರಂದು ಮುಕ್ತಾಯಗೊಂಡ ನಂತರ ಈ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇವರು 2027ರ ಫೆಬ್ರವರಿ 9ರ ವರೆಗೆ, ಅಂದರೆ ಸುಮಾರು 14 ತಿಂಗಳುಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಈ ಬಾರಿಯ ಪ್ರಮಾಣವಚನ ಸಮಾರಂಭವು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಒಂದು ವಿಶೇಷ ದಾಖಲೆಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಭಾರತದ ಸಿಜೆಐ ಪ್ರಮಾಣವಚನ ಸಮಾರಂಭದಲ್ಲಿ ಭೂತಾನ್, ಕೀನ್ಯಾ, ಮಾರಿಷಿಯಸ್, ನೇಪಾಳ, ಶ್ರೀಲಂಕಾ ಮತ್ತು ಬ್ರೆಜಿಲ್ ಸೇರಿದಂತೆ 7 ರಾಷ್ಟ್ರಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಗಣ್ಯರ ಉಪಸ್ಥಿತಿಯು ಈ ಸಮಾರಂಭಕ್ಕೆ ವಿಶೇಷ ಮೆರಗು ನೀಡಲಿದೆ.
ಸಮಾರಂಭದಲ್ಲಿ ನ್ಯಾ. ಸೂರ್ಯಕಾಂತ್ ಅವರ ಕುಟುಂಬ ಸದಸ್ಯರು ಕೂಡ ಭಾಗವಹಿಸಲಿದ್ದಾರೆ. ಅವರ ಸಹೋದರರಾದ ರಿಷಿಕಾಂತ್, ಶಿವಕಾಂತ್ ಮತ್ತು ದೇವಕಾಂತ್ ಅವರು ತಮ್ಮ ಕುಟುಂಬಗಳ ಸಮೇತ ದೆಹಲಿಗೆ ಆಗಮಿಸಿದ್ದು, ಹರಿಯಾಣ ಭವನದಲ್ಲಿ ತಂಗಿದ್ದಾರೆ.






