ದೆಹಲಿ: ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸಂಚರಿಸುವ ಅತ್ಯಾಧುನಿಕ ‘ನಮೋ ಭಾರತ್’ (Regional Rapid Transit System – RRTS) ರೈಲುಗಳಲ್ಲಿ ಇದೀಗ ವಿವಾಹಪೂರ್ವ ಚಿತ್ರೀಕರಣ (Pre-Wedding Shoot), ಹುಟ್ಟುಹಬ್ಬದ ಆಚರಣೆ (Birthday Celebrations) ಮತ್ತು ಇತರೆ ಖಾಸಗಿ ಸಮಾರಂಭಗಳಿಗೆ ಅವಕಾಶ ನೀಡಲು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಮುಂದಾಗಿದೆ.
ಸಾರ್ವಜನಿಕ ಸಾರಿಗೆಯಲ್ಲಿ ಈ ರೀತಿಯ ವಿಶಿಷ್ಟ ಯೋಜನೆಯನ್ನು ಜಾರಿಗೆ ತರಲು NCRTC ನಿರ್ಧರಿಸಿದ್ದು, ಆಯೋಜಕರು, ಚಿತ್ರೀಕರಣ ತಂಡಗಳು ಮತ್ತು ಮಾಧ್ಯಮ ಸಂಸ್ಥೆಗಳು ರೈಲಿನ ಬೋಗಿಗಳನ್ನು (Coaches) ಈ ಖಾಸಗಿ ಕಾರ್ಯಕ್ರಮಗಳಿಗಾಗಿ ಬುಕ್ ಮಾಡಲು ಅವಕಾಶವಿದೆ.
ಸಮಾರಂಭಗಳು ಅಥವಾ ಚಿತ್ರೀಕರಣಕ್ಕಾಗಿ ಗಂಟೆಗೆ ₹5,000 ಶುಲ್ಕ (₹5,000 per hour)ಹಾಗೂ ಅಲಂಕಾರ ಮಾಡಲು ಮತ್ತು ಅದನ್ನು ತೆಗೆಯಲು ಹೆಚ್ಚುವರಿಯಾಗಿ ಅರ್ಧ ಗಂಟೆ ಸಮಯ ಸಿಗಲಿದೆ. ಈ ಕಾರ್ಯಕ್ರಮಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ನಮೋ ಭಾರತ್ ರೈಲುಗಳು ತಮ್ಮ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಸೌಲಭ್ಯಗಳಿಂದಾಗಿ ಈಗಾಗಲೇ ಪ್ರಸಿದ್ಧವಾಗಿವೆ. ಈ ವಿಶಿಷ್ಟ ಯೋಜನೆಯು ರೈಲುಗಳಲ್ಲಿ ಜನರಿಗೆ ಹೊಸ ರೀತಿಯ ಅನುಭವ ನೀಡಲಿದೆ ಎಂದು NCRTC ತಿಳಿಸಿದೆ.
ಜಾಹೀರಾತು, ಡಾಕ್ಯುಮೆಂಟರಿ(Documentaries) ಮತ್ತಿತರ ವಾಣಿಜ್ಯ ಯೋಜನೆಗಳ ಚಿತ್ರೀಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿಗಳಿವೆ ಎಂದು NCRTC ಸ್ಪಷ್ಟಪಡಿಸಿದೆ.






