ದಾಂಡೇಲಿ(ಉತ್ತರಕನ್ನಡ): ಪ್ರಸ್ತುತ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾದ ಆದ್ಯತೆಯನ್ನು ನೀಡುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರವನ್ನು ಪರಿಗಣಿಸದಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಬೇಸರ ವ್ಯಕ್ತಪಡಿಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಅನೇಕ ಹುದ್ದೆಗಳು ಖಾಲಿ ಇವೆ. ನಿವೃತ್ತಿ ಹಾಗೂ ರಾಜೀನಾಮೆಯಿಂದ ತೆರವಾಗಿರುವ ಈ ಸ್ಥಾನಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಈವರೆಗೂ ಮುಂದಾಗಿಲ್ಲ ಎಂದು ಆರೋಪಿಸಿದರು.
ಹುದ್ದೆಗಳ ನೇಮಕಾತಿಯಲ್ಲಿನ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಸಾಧ್ಯವಾಗುತ್ತಿದೆ. ಶಿಕ್ಷಣ ಕ್ಷೇತ್ರದ ಈ ಗಂಭೀರ ಸಮಸ್ಯೆಗಳ ಕುರಿತಂತೆ ನಾನು ಪ್ರತಿ ಬಾರಿಯೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರೋಷನ್ ನೇತ್ರಾವಳಿ ಉಪಸ್ಥಿತರಿದ್ದರು.






