ಕೊಪ್ಪಳ: ಮೀನು ಹಿಡಿಯಲು ಹೋಗಿದ್ದ ಇಬ್ಬರು ಮೀನುಗಾರರು ಕೆರೆಯಲ್ಲಿ ಮುಳುಗಿ ನೀರುಪಾಲಾದ ಧಾರುಣ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದಿದೆ. ಜೀವನೋಪಾಯಕ್ಕಾಗಿ ಮೀನು ಶಿಕಾರಿಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಕಣ್ಮರೆಯಾದವರನ್ನು ಫಕೀರಸಾಬ್(36) ಮತ್ತು ಶರಣಪ್ಪ(32) ಎಂದು ಗುರುತಿಸಲಾಗಿದೆ. ಇವರಿಬ್ಬರು ಮಲಕಸಮುದ್ರ ಗ್ರಾಮದ ಕೆರೆಗೆ ಎಂದಿನಂತೆ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದರು. ಮೀನು ಹಿಡಿಯುವ ಸಮಯದಲ್ಲಿ ಆಕಸ್ಮಿಕವಾಗಿ ಸಮತೋಲನ ತಪ್ಪಿ ತೆಪ್ಪ ಮಗುಚಿ ಬಿದ್ದ ಪರಿಣಾಮ, ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದೊಂದಿಗೆ ಕೆರೆಯಲ್ಲಿ ಕಣ್ಮರೆಯಾದ ಇಬ್ಬರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದುವರೆಗೂ ಇಬ್ಬರ ಸುಳಿವು ಪತ್ತೆಯಾಗಿಲ್ಲವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.






