ದಾವಣಗೆರೆ: ರಕ್ಷಣೆ ನೀಡಬೇಕಾದ ಪೊಲೀಸರೇ ದರೋಡೆಕೋರರಂತೆ ವರ್ತಿಸಿ, ಚಿನ್ನದ ವ್ಯಾಪಾರಿಯೊಬ್ಬನನ್ನು ಬೆದರಿಸಿ ಚಿನ್ನಾಭರಣ ದೋಚಿದ್ದ ಇಬ್ಬರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ಬಂಧಿಸಿದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪಿಎಸ್‌ಐಗಳಾದ ಮಾಳಪ್ಪ ಚಿಪ್ಪಲಕಟ್ಟಿ ಮತ್ತು ಪ್ರವೀಣಕುಮಾರ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಅರ್ಕಸಾಲಿ ಅವರು ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ಕೊಡುತ್ತಿದ್ದರು. ನವೆಂಬರ್ 24ರ ಮಧ್ಯರಾತ್ರಿ 12.30ರ ಸುಮಾರಿಗೆ ವಿಶ್ವನಾಥ್ ಅವರು ಕೆಲಸ ಮುಗಿಸಿ ದಾವಣಗೆರೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅವರನ್ನು ಹಿಂಬಾಲಿಸಿದ ಹಾವೇರಿ ಮೂಲದ ಹಾಗೂ ಪ್ರಸ್ತುತ ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐಗಳಾದ ಮಾಳಪ್ಪ ಮತ್ತು ಪ್ರವೀಣಕುಮಾರ್, ಮಫ್ತಿಯಲ್ಲಿ ಬಂದು ಅಡ್ಡಗಟ್ಟಿದ್ದಾರೆ.
ತಾವು ಪೊಲೀಸ್ ಅಧಿಕಾರಿಗಳೆಂದು ಐಡಿ ಕಾರ್ಡ್ ತೋರಿಸಿ, ವಿಶ್ವನಾಥ್ ಅವರನ್ನು ಮೊದಲು ಪೊಲೀಸ್ ಜೀಪ್‌ನಲ್ಲಿ ಹಾಗೂ ನಂತರ ಖಾಸಗಿ ಕಾರಿನಲ್ಲಿ ಕೆಟಿಜೆ ನಗರ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಬೆದರಿಕೆ ಹಾಕಿ ಅವರ ಬಳಿಯಿದ್ದ 76 ಗ್ರಾಂ ಚಿನ್ನದ ಗಟ್ಟಿ ಮತ್ತು 2.15 ಗ್ರಾಂ ತೂಕದ ಬೇಬಿ ರಿಂಗ್ (ಚಿನ್ನದ ಉಂಗುರ) ಅನ್ನು ಕಿತ್ತುಕೊಂಡು, ವಿಶ್ವನಾಥ್ ಅವರನ್ನು ಮತ್ತೆ ಬಸ್ ನಿಲ್ದಾಣಕ್ಕೆ ಬಿಟ್ಟು ಪರಾರಿಯಾಗಿದ್ದರು.
ಘಟನೆಯಿಂದ ಆತಂಕಗೊಂಡ ವಿಶ್ವನಾಥ್, ಊರಿಗೆ ತೆರಳಿ ವಿಷಯ ತಿಳಿಸಿ ನಂತರ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿ ಪಿಎಸ್‌ಐಗಳನ್ನು ಬಂಧಿಸಿದ್ದಾರೆ.
ಇವರಿಗೆ ಚಿನ್ನದ ವ್ಯಾಪಾರಿಯ ಬಗ್ಗೆ ಮಾಹಿತಿ ನೀಡಿದ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ದಾವಣಗೆರೆಯ ಆಭರಣ ತಯಾರಕರಾದ ಸತೀಶ್ ರೇವಣಕರ್ ಮತ್ತು ಶಿರಸಿ ಮೂಲದ ನಾಗರಾಜ್ ರೇವಣಕರ್ ಅವರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು ಮತ್ತು ನಕಲಿ ಗನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.






