ಕೊಪ್ಪಳ: ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಸ್ಟ್ರೆಚರ್ ಮತ್ತು ವೀಲ್ ಚೇರ್ ದೊರೆಯದೆ, ಅಸ್ವಸ್ಥ ತಾಯಿಯನ್ನು ಮಗನೇ ಎತ್ತಿಕೊಂಡು ಮೂರು ಅಂತಸ್ತು ಇಳಿದು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಕೊಪ್ಪಳ ತಾಲೂಕಿನ ಇಂದಿರಾನಗರದ ನಿವಾಸಿ, 64 ವರ್ಷದ ಯಮನವ್ವ ಅವರು ಮೂರ್ಛೆ ರೋಗದ (epilepsy) ಚಿಕಿತ್ಸೆಗಾಗಿ ಕಳೆದ ಮೂರು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನವೆಂಬರ್ 21ರ ರಾತ್ರಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ, ಅವರಿಗೆ ಏಕಾಏಕಿ ತೀವ್ರ ಸೆಳವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರ ಸ್ಥಿತಿ ಗಂಭೀರವಾದರೂ, ಆ ಸಮಯದಲ್ಲಿ ಅವರಿಗೆ ನೆರವಾಗಲು ಯಾವುದೇ ವೈದ್ಯರು ಅಥವಾ ನರ್ಸ್‌ಗಳು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ.
ತಾಯಿಯನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲು ಹುಡುಕಾಡಿದರೂ ಆಸ್ಪತ್ರೆಯಲ್ಲಿ ವೀಲ್ ಚೇರ್ ಆಗಲಿ ಅಥವಾ ಸ್ಟ್ರೆಚರ್ ಆಗಲಿ ಲಭ್ಯವಿರಲಿಲ್ಲ. ತಾಯಿಯ ಪ್ರಾಣ ಉಳಿಸಲು ಬೇರೆ ದಾರಿ ಕಾಣದ ದಿನಗೂಲಿ ಕಾರ್ಮಿಕನಾಗಿರುವ ಮಗ ಕೃಷ್ಣ, ಅಸ್ವಸ್ಥ ತಾಯಿಯನ್ನು ತಮ್ಮ ತೋಳಲ್ಲಿ ಎತ್ತಿಕೊಂಡು ಮೂರನೇ ಮಹಡಿಯಿಂದ ಕೆಳಗಿರುವ ತುರ್ತು ಚಿಕಿತ್ಸಾ ವಿಭಾಗಕ್ಕೆ ಓಡಿ ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.






