ಬೆಂಗಳೂರು: ಪತಿ ತನ್ನ ದೇಹಕ್ಕೆ ಪಾದರಸ (Mercury) ಚುಚ್ಚುಮದ್ದು ನೀಡಿದ್ದರಿಂದ ಕಳೆದ ಒಂಬತ್ತು ತಿಂಗಳುಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯಲ್ಲಿ ನಡೆದಿದೆ. ವಿದ್ಯಾ ಮೃತ ದುರ್ದೈವಿ. ಸಾವಿಗೂ ಕೇವಲ ಮೂರು ದಿನಗಳ ಮುನ್ನವಷ್ಟೇ (ನವೆಂಬರ್ 23) ಅವರು ಪತಿ ಬಸವರಾಜ್ ಮತ್ತು ಮಾವ ಮರಿಸ್ವಾಮಾಚಾರಿ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಫೆಬ್ರವರಿ 26 ರಂದು ಪತಿ ಬಸವರಾಜ್ ಮತ್ತು ಮಾವ ಸೇರಿಕೊಂಡು ವಿದ್ಯಾ ಅವರನ್ನು ಕೊಲ್ಲುವ ಉದ್ದೇಶದಿಂದ ದೇಹಕ್ಕೆ ಪಾದರಸವನ್ನು ಇಂಜೆಕ್ಟ್ ಮಾಡಿದ್ದರು ಎನ್ನಲಾಗಿದೆ. ಪತಿ ಮತ್ತು ಮಾವ ತಮಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು, ‘ಹುಚ್ಚಿ’ ಎಂದು ಹೀಯಾಳಿಸುತ್ತಿದ್ದರು ಹಾಗೂ ಮನೆಯಲ್ಲೇ ಕೂಡಿ ಹಾಕಿ ಸಂಬಂಧಿಕರ ಮನೆಗೂ ಹೋಗಲು ಬಿಡದೇ ನಿಂದಿಸುತ್ತಿದ್ದರು ಎಂದು ವಿದ್ಯಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಫೆಬ್ರವರಿ 26 ರಂದು ನಿದ್ದೆಯಲ್ಲಿದ್ದ ವಿದ್ಯಾ ಅವರಿಗೆ ಮರುದಿನ ಎಚ್ಚರವಾದಾಗ ಬಲ ತೊಡೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ನೋವು ಉಲ್ಬಣಗೊಂಡಿದ್ದರಿಂದ ಮಾರ್ಚ್ 7 ರಂದು ಅತ್ತಿಬೆಲೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲಾದಾಗ, ವೈದ್ಯಕೀಯ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಪಾದರಸ ಇರುವುದು ದೃಢಪಟ್ಟಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದರೂ, ಪಾದರಸದ ವಿಷವು ದೇಹದಾದ್ಯಂತ ಹರಡಿ ಪ್ರಮುಖ ಅಂಗಾಂಗಗಳಿಗೆ ಹಾನಿಯುಂಟುಮಾಡಿತ್ತು. ಅಂತಿಮವಾಗಿ 9 ತಿಂಗಳ ಸುದೀರ್ಘ ನರಕಯಾತನೆಯ ಬಳಿಕ ವಿದ್ಯಾ ಅವರು ಮೃತಪಟ್ಟಿದ್ದು, ನಾಲ್ಕು ವರ್ಷದ ಮಗು ತಾಯಿಯನ್ನು ಕಳೆದುಕೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






