ಬೆಂಗಳೂರು: ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆ ಕುರಿತು ಗೊಂದಲಗಳು ಮುಂದುವರಿದಿರುವ ನಡುವೆಯೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy CM D.K. Shivakumar) ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಮುಂದೆ ಮಹತ್ವದ “ಆಫರ್” (Offer)ಇಟ್ಟಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸಿಎಂ ಹುದ್ದೆ ಬದಲಾವಣೆಗೆ ಬೆಂಬಲ ನೀಡುವಂತೆ ಕೋರಿ ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ (Minister Satish Jarkiholi) ಅವರ ಬಳಿ ಕೇಳಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಪಕ್ಷಕ್ಕೆ ಬಂದಾಗಿನಿಂದ ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಆದ್ದರಿಂದ, ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ತಾವು (ಸತೀಶ್ ಜಾರಕಿಹೊಳಿ) ಸಿದ್ದರಾಮಯ್ಯನವರಿಗೆ ಮನವೊಲಿಸಿ.
ನಾನು ಸಿಎಂ ಆದರೂ, ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲೇ ಸರ್ಕಾರವನ್ನು ನಡೆಸುತ್ತೇನೆ. ಹಾಗೂ ನೀವೇ (ಸತೀಶ್ ಜಾರಕಿಹೊಳಿ) ಕೆಪಿಸಿಸಿ ಅಧ್ಯಕ್ಷರಾಗಿ(KPCC President). ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ನೀವು ಬಯಸಿದ ಖಾತೆಯನ್ನು ನೀಡಿ, ನನ್ನ ರೀತಿಯಲ್ಲಿ ಎರಡೂ ಹುದ್ದೆಗಳಲ್ಲಿ ಮುಂದುವರೆಯಿರಿ. ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಸಲಹೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ಸಿದ್ದರಾಮಯ್ಯನವರನ್ನ (Siddaramaiah) ಬಿಟ್ಟು ಬರಲು ನಾವು ಆಗಲ್ಲ. ಹೈಕಮಾಂಡ್ ನಿರ್ಧಾರ ಮಾಡಿದರೆ ಅದಕ್ಕೆ ನಾವು ಬದ್ಧ. ಹೈಕಮಾಂಡ್ ನಿರ್ಣಯ ಮಾಡಲಿ, ನೋಡೋಣ. ನಾವಾಗಿಯೇ ಯಾರನ್ನೂ ಸಿಎಂ ಮಾಡಿ ಎಂದು ಕೇಳಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.






