ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಮತ್ತು ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಡರಾತ್ರಿ ನಡೆಸಿದ ರಹಸ್ಯ ಸಭೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ರಾಜಕೀಯವಾಗಿ ಭಿನ್ನ ಧ್ರುವಗಳಂತೆ ಅಥವಾ ವಿರುದ್ಧ ದಿಕ್ಕಿನ ನಾಯಕರಂತೆ ಬಿಂಬಿತವಾಗಿದ್ದ ಇವರಿಬ್ಬರು, ಏಕಾಏಕಿ ಒಂದೆಡೆ ಕಲೆತು ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಈ ಇಬ್ಬರು ಪ್ರಭಾವಿ ನಾಯಕರು ಮುಖಾಮುಖಿಯಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದೊಂದು ‘ಒನ್ ಟು ಒನ್’ (One-to-one) ಸಭೆಯಾಗಿದ್ದು, ಇಬ್ಬರ ನಡುವೆ ಅತ್ಯಂತ ಆತ್ಮೀಯ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸದಾ ಅಂತರ ಕಾಯ್ದುಕೊಳ್ಳುತ್ತಿದ್ದ ನಾಯಕರು ಇದೀಗ ಮಧ್ಯರಾತ್ರಿ ಒಂದೆಡೆ ಸೇರಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಮುನ್ಸೂಚನೆ ನೀಡಿದಂತಿದೆ.
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಈ ‘ಮಿಡ್ ನೈಟ್ ಮೀಟಿಂಗ್’ ಮಹತ್ವ ಪಡೆದುಕೊಂಡಿದೆ. ಇಬ್ಬರ ನಡುವಿನ ಈ ರಹಸ್ಯ ಭೇಟಿಯ ಉದ್ದೇಶವೇನು? ಚರ್ಚೆಯಾದ ವಿಷಯಗಳೇನು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲವಾದರೂ, ಈ ಭೇಟಿ ಆಡಳಿತ ಪಕ್ಷದ ಆಂತರಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ.






