ಮುಂಬೈ: 252 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದ ಖ್ಯಾತ ಇನ್‌ಫ್ಲುಯೆನ್ಸರ್ ಓರ್ಹಾನ್ ಅವತ್ರಮಣಿ ಅಲಿಯಾಸ್ ‘ಓರಿ’ (Orry) ಬುಧವಾರ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ನ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ (ANC) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಆರಂಭದಲ್ಲಿ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ್ದ ಓರಿ, ಇದೀಗ ತನಿಖಾಧಿಕಾರಿಗಳ ಮುಂದೆ ಬಂದು ವಿಚಾರಣೆ ಎದುರಿಸಿದ್ದಾರೆ.
ವಿಚಾರಣೆಗೆ ಹಾಜರಾಗಲು ಕಚೇರಿಗೆ ಆಗಮಿಸುತ್ತಿದ್ದಂತೆಯೇ ಓರಿ ಅವರನ್ನು ನೋಡಲು ಕಚೇರಿಯ ಹೊರಗೆ ಅಪಾರ ಜನಸ್ತೋಮ ಜಮಾಯಿಸಿತ್ತು. ಪಾಪರಾಜಿಗಳು ಮತ್ತು ಜನರು ಫೋಟೋ, ವಿಡಿಯೋ ತೆಗೆಯಲು ಮುಗಿಬಿದ್ದ ಪರಿಣಾಮ ಓರಿ ಅವರು ನೂಕುನುಗ್ಗಲಿಗೆ ಸಿಲುಕಿದರು. ಈ ಗೊಂದಲದ ನಡುವೆಯೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ನೇರವಾಗಿ ಅಧಿಕಾರಿಗಳ ಮುಂದೆ ಹಾಜರಾದರು. ಕಂದು ಬಣ್ಣದ ಶರ್ಟ್ ಮತ್ತು ಕನ್ನಡಕ ಧರಿಸಿದ್ದ ಓರಿ ಅವರನ್ನು ಅವರ ಬಾಡಿಗಾರ್ಡ್‌ಗಳು ರಕ್ಷಿಸಿ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ದುಬೈನಿಂದ ಗಡಿಪಾರು ಮಾಡಲ್ಪಟ್ಟ ಡ್ರಗ್ ಸಾಗಣೆದಾರ ಮೊಹಮ್ಮದ್ ಸಲೀಂ ಮೊಹಮ್ಮದ್ ಸುಹೇಲ್ ಶೇಖ್ ನೀಡಿದ ಹೇಳಿಕೆ ಮೇರೆಗೆ ಓರಿ ಅವರಿಗೆ ಸಮನ್ಸ್ ನೀಡಲಾಗಿತ್ತು. ದಾವೂದ್ ಇಬ್ರಾಹಿಂ ಗ್ಯಾಂಗ್‌ನೊಂದಿಗೆ ನಂಟು ಹೊಂದಿದ್ದ ಶೇಖ್, ತಾನು ದುಬೈ ಮತ್ತು ಮುಂಬೈನಲ್ಲಿ ಆಯೋಜಿಸುತ್ತಿದ್ದ ಐಷಾರಾಮಿ ಪಾರ್ಟಿಗಳಲ್ಲಿ ಓರಿ ಸೇರಿದಂತೆ ನೋರಾ ಫತೇಹಿ, ಶ್ರದ್ಧಾ ಕಪೂರ್, ಸಿದ್ಧಾಂತ್ ಕಪೂರ್ ಮುಂತಾದವರು ಭಾಗವಹಿಸುತ್ತಿದ್ದರು ಎಂದು ಆರೋಪಿಸಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ಧಾಂತ್ ಕಪೂರ್ ಕೂಡ ಮಂಗಳವಾರ ಎಎನ್‌ಸಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು ಎಂಬುದು ಗಮನಾರ್ಹ.






