ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail )ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಗಂಭೀರ ಕರ್ಮಕಾಂಡ ಬಯಲಾಗಿದೆ. ಜೈಲಿನಲ್ಲಿನ ಕೈದಿಗಳು ತಾವು ತಯಾರಿಸಿದ ಹಣ್ಣಿನ ಮದ್ಯ(Fruit liquor)ದಿಂದಲೇ ಜೈಲಿನೊಳಗೆ ಪಾರ್ಟಿ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಜೈಲಿನ ಕ್ಯಾಂಟೀನ್‌ಗೆ ಬರುವ ಸೇಬು, ದ್ರಾಕ್ಷಿ, ಅನಾನಸ್(Apples, Grapes, and Pineapples)ನಂತಹ ಹಣ್ಣುಗಳನ್ನು ಬಳಸಿ ಮದ್ಯವನ್ನು ತಯಾರಿಸಲಾಗುತ್ತಿದೆ. ಈ ಹಣ್ಣುಗಳನ್ನು ಜೈಲಿನ ಆವರಣದ ಭೂಮಿಯೊಳಗೆ ಶೇಖರಿಸಿಡಲಾಗುತ್ತದೆ. ಈ ಹಣ್ಣುಗಳು ಕೊಳೆತು, ಸ್ವಾಭಾವಿಕವಾಗಿ ಆಲ್ಕೋಹಾಲ್‌ಗೆ (Alcohol)ಪರಿವರ್ತನೆ ಆದ ಬಳಿಕ, ಆ ದ್ರವವನ್ನು ತೆಗೆದು ಜೈಲಿನಲ್ಲೇ ಮಾರಾಟ ಮಾಡಲಾಗುತ್ತಿದೆ.
ಕೈದಿಗಳು ಸುಮಾರು ಒಂದು ತಿಂಗಳಿನಿಂದ ಇದೇ ರೀತಿ ಮದ್ಯ ತಯಾರಿಸಿ, ಹುಟ್ಟುಹಬ್ಬದ (Birthday celebrations ) ಸಂದರ್ಭಗಳಲ್ಲಿ ಜೈಲಿನಲ್ಲೇ ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಸೌಲಭ್ಯಗಳು, ರಾಜಾತಿಥ್ಯ (VVIP treatment) ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ಇದೀಗ ಮದ್ಯ ತಯಾರಿಕೆ ಮತ್ತು ಪಾರ್ಟಿಯ ವಿಷಯ ಬಯಲಾಗಿರುವುದು ಜೈಲಿನ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.






