ಬೆಂಗಳೂರು: ನಗರದ ಪ್ರಖ್ಯಾತ ಕಬ್ಬನ್ ಪಾರ್ಕ್‌ನಲ್ಲಿ ಬರೋಬ್ಬರಿ 10 ವರ್ಷಗಳ ಸುದೀರ್ಘ ಅವಧಿಯ ನಂತರ ಮತ್ತೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯು ಈ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇಂದಿನಿಂದಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.
ಈ ಪುಷ್ಪ ಪ್ರದರ್ಶನವು ಇಂದಿನಿಂದ ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಲಿದೆ. ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉದ್ಯಾನವನಕ್ಕೆ ಭೇಟಿ ನೀಡಿ ಹೂವಿನ ಅಲಂಕಾರಗಳನ್ನು ಕಣ್ತುಂಬಿಕೊಳ್ಳಬಹುದು. ದಶಕದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಇಂತಹದೊಂದು ಬೃಹತ್ ಪ್ರದರ್ಶನ ನಡೆಯುತ್ತಿರುವುದು ನಗರದ ಜನತೆಯಲ್ಲಿ ಕುತೂಹಲ ಮೂಡಿಸಿದೆ.
ಪ್ರದರ್ಶನ ವೀಕ್ಷಣೆಗೆ ಪ್ರವೇಶ ದರಗಳನ್ನು ನಿಗದಿಪಡಿಸಲಾಗಿದ್ದು, ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಶುಲ್ಕವಿರಲಿದೆ. ಆದರೆ, ಮಕ್ಕಳ ದಿನಾಚರಣೆಯ ಅಂಗವಾಗಿ ವಿಶೇಷ ರಿಯಾಯಿತಿಯನ್ನು ನೀಡಲಾಗಿದ್ದು, ಶಾಲಾ ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಾಗಿದೆ.






