ಬೆಂಗಳೂರು: ನಿವೃತ್ತ ಡಿಜಿಪಿ (DGP) ಓಂ ಪ್ರಕಾಶ್ (Om Prakash) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ಸಿಸಿಬಿ (CCB) ಪೊಲೀಸರು ಹಲವು ಮಹತ್ವದ ಅಂಶಗಳನ್ನು ಬಯಲಿಗೆಳೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾದ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ (wife Pallavi) ಅವರು ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿತ್ತು. ಆದರೆ, ನಿಮ್ಹಾನ್ಸ್ (NIMHANS) ವೈದ್ಯರ ವರದಿಯ ಪ್ರಕಾರ, ಪಲ್ಲವಿ ಸಂಪೂರ್ಣವಾಗಿ ‘ಫಿಟ್ & ಫೈನ್’ (Fit & Fine) ಆಗಿದ್ದಾರೆ.
ಪಲ್ಲವಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ತೀವ್ರ ತಪಾಸಣೆಗೊಳಪಡಿಸಲಾಗಿತ್ತು. ಈ ಅವಧಿಯಲ್ಲಿ ವೈದ್ಯರು ವೈಯಕ್ತಿಕ ವಿಚಾರಣೆ (Personal Interrogation), ಸಿಸಿಟಿವಿ ಸರ್ವಲೆನ್ಸ್, ಐಕ್ಯೂ ಟೆಸ್ಟ್ (IQ Test), ಮತ್ತು ಪ್ರಶ್ನೋತ್ತರ ಸೇರಿದಂತೆ ಹಲವು ಮಾನಸಿಕ ಪರೀಕ್ಷೆಗಳನ್ನು ನಡೆಸಿದ್ದರು. ಎಲ್ಲಾ ಪರೀಕ್ಷೆಗಳ ನಂತರ, ವೈದ್ಯರು ಪಲ್ಲವಿ ಅವರು ಮಾನಸಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ ಎಂದು ದೃಢಪಡಿಸಿ ವರದಿ ನೀಡಿದ್ದಾರೆ. ವೈದ್ಯರ ಈ ವರದಿಯನ್ನು ಉಲ್ಲೇಖಿಸಿ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ.
ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಸಾಕ್ಷ್ಯವನ್ನು ಕಲೆಹಾಕಿದ್ದಾರೆ. ಓಂ ಪ್ರಕಾಶ್ ಅವರನ್ನು ಕೊಂದ ನಂತರ ಪಲ್ಲವಿ ಅವರು “I HAVE KILLED MONSTER” (ನಾನು ರಾಕ್ಷಸನನ್ನು ಕೊಂದಿದ್ದೇನೆ) ಎಂದು ಧ್ವನಿ ಟಿಪ್ಪಣಿ (Voice Note) ಕಳುಹಿಸಿದ್ದರು.
ಈ ವಾಯ್ಸ್ ನೋಟ್‌ಅನ್ನು ಎಫ್‌ಎಸ್‌ಎಲ್‌ಗೆ (FSL – Forensic Science Laboratory) ಕಳುಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ಬಂದಿರುವ ವರದಿಯ ಪ್ರಕಾರ, ಆ ವಾಯ್ಸ್ ನೋಟ್‌ನಲ್ಲಿರುವ ಧ್ವನಿ ಮತ್ತು ಪಲ್ಲವಿ ಅವರ ಧ್ವನಿ ತಾಳೆಯಾಗಿದೆ.
ಪ್ರಕರಣದ ವಿಚಾರಣೆ (ಟ್ರಯಲ್) ಈಗಾಗಲೇ ಶುರುವಾಗಿದ್ದು, ಪಲ್ಲವಿ ಕಳೆದ ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಟ್ರಯಲ್ ಮುಗಿಯುವವರೆಗೆ ಅವರಿಗೆ ಜಾಮೀನು (Bail) ಸಿಗುವ ಸಾಧ್ಯತೆ ಕಡಿಮೆ ಇದೆ.






