ಪರ್ತಗಾಳಿ(ಗೋವಾ): ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಠಿತ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ 550ನೇ ವರ್ಷದ ಸಂಭ್ರಮಾಚರಣೆ ಹಾಗೂ 550 ಕೋಟಿ ಶ್ರೀರಾಮ ಜಪ ಯಜ್ಞ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ‘ಶ್ರೀ ರಾಮ ದಿಗ್ವಿಜಯ ರಥಯಾತ್ರೆ’ಯು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಅಕ್ಟೋಬರ್ 19 ರಂದು ಉತ್ತರಾಖಂಡದ ಬದರಿನಾಥ ಧಾಮದಿಂದ ಹೊರಟಿದ್ದ ಈ ರಥವು, ನವೆಂಬರ್ 26 ರಂದು ಗೋವಾದ ಪರ್ತಗಾಳಿ ಮೂಲ ಮಠವನ್ನು ತಲುಪುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ರಥದ ಆಗಮನದ ವೇಳೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಈ ಯಾತ್ರೆಯು ಬರೋಬ್ಬರಿ 40 ದಿನಗಳ ಕಾಲ ದೇಶಾದ್ಯಂತ ಸಂಚರಿಸಿದ್ದು, ಸುಮಾರು 7 ಸಾವಿರ ಕಿಲೋಮೀಟರ್ ದೂರವನ್ನು ಕ್ರಮಿಸಿದೆ. ಶರಣ ಭಟ್ ಶಿರಸಿ, ಕೃಷ್ಣ ಭಟ್, ಆನಂದ ಭಟ್, ಗೋಪಾಲ ಭಟ್, ಗಿರಿಧರ ನಾಯಕ, ಚಂದ್ರಹಾಸ ನಾಯಕ, ಸಂತೋಷ ಪೈ, ಸಂದೀಪ ಭಟ್, ರಘುರಾಮ ಪೈ, ಬಸವರಾಜ ಹಾಗೂ ಶ್ರೀನಿವಾಸ ಕಾಮತ ಸೇರಿದಂತೆ ಪ್ರಮುಖ ರಾಮ ಸೇವಕರ ತಂಡ ಈ ಸುದೀರ್ಘ ಯಾತ್ರೆಯಲ್ಲಿ ಪಾಲ್ಗೊಂಡಿತ್ತು. ರಥವು ಸಂಚರಿಸಿದ ಹಾದಿಯುದ್ದಕ್ಕೂ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಭಕ್ತರಿಂದ ಅಭೂತಪೂರ್ವ ಸ್ವಾಗತ ದೊರೆತಿದೆ.
ಈ ಬೃಹತ್ ಯಾತ್ರೆಯ ಯಶಸ್ಸಿನ ಹಿಂದೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆರು ತಿಂಗಳ ಪೂರ್ವ ತಯಾರಿ ಮತ್ತು ದೂರದರ್ಶಿತ್ವವಿದೆ. ವಾಹನದ ವೇಗ, ತಂಗುವ ಸ್ಥಳ ಮತ್ತು ಸಮಯ ಪಾಲನೆಯ ಬಗ್ಗೆ ಸ್ವಾಮೀಜಿಗಳು ಕಳೆದ ಆರು ತಿಂಗಳಿಂದಲೇ ಖುದ್ದಾಗಿ ನಕ್ಷೆಯನ್ನು ರೂಪಿಸಿ ರಾಮ ಸೇವಕರಿಗೆ ಮಾರ್ಗದರ್ಶನ ನೀಡಿದ್ದರು. ಸ್ವಾಮೀಜಿಯವರ ಈ ನಿಖರವಾದ ಯೋಜನೆ ಮತ್ತು ಹಾಕಿಕೊಟ್ಟ ನಕ್ಷೆಯಂತೆಯೇ ಸಂಚರಿಸಿದ ಪರಿಣಾಮ, ಯಾವುದೇ ಅಡಚಣೆಗಳಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ರಥವು ಸುರಕ್ಷಿತವಾಗಿ ಪರ್ತಗಾಳಿ ಮಠವನ್ನು ತಲುಪಿದೆ ಎನ್ನುವ ಅಭಿಪ್ರಾಯ ಭಕ್ತರಿಂದ ವ್ಯಕ್ತವಾಗಿದೆ.






