ಮುಂಬೈ: ಬಾಲಿವುಡ್‌ನ ಹಿರಿಯ ನಟ, ಪತಿ ಧರ್ಮೇಂದ್ರ ಅವರ ನಿಧನದ ಮೂರು ದಿನಗಳ ಬಳಿಕ ನಟಿ ಹೇಮಮಾಲಿನಿ ಅವರು ಟ್ವಿಟರ್‌ನಲ್ಲಿ (ಎಕ್ಸ್) ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿಯ ಅಗಲಿಕೆಯ ನೋವನ್ನು ತೋಡಿಕೊಂಡಿರುವ ಅವರು, ಧರ್ಮೇಂದ್ರ ಅವರು ತಮಗೆ ಕೇವಲ ಪತಿಯಾಗಿರದೆ, ಒಬ್ಬ ಆಪ್ತ ಸ್ನೇಹಿತನಾಗಿದ್ದರು ಎಂದು ಸ್ಮರಿಸಿದ್ದಾರೆ.
“ಧರಮ್ ಜಿ ನನಗೆ ಸರ್ವಸ್ವವಾಗಿದ್ದರು. ಅವರು ಪ್ರೀತಿಯ ಪತಿ, ನಮ್ಮ ಮಕ್ಕಳಾದ ಇಶಾ ಮತ್ತು ಅಹಾನಾಗೆ ಅಕ್ಕರೆಯ ತಂದೆ, ನನಗೆ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕರೂ ಆಗಿದ್ದರು. ಕಷ್ಟ ಸುಖಗಳಲ್ಲಿ ಸದಾ ನನ್ನ ಬೆಂಬಲಕ್ಕೆ ನಿಂತಿದ್ದ ನನ್ನ ‘ಗೋ ಟು’ ವ್ಯಕ್ತಿ ಅವರು,” ಎಂದು ಬರೆದುಕೊಂಡಿದ್ದಾರೆ.
”ಅಪಾರ ಜನಪ್ರಿಯತೆಯ ನಡುವೆಯೂ ಅವರ ಸರಳತೆ ಅವರನ್ನು ಈ ಮಟ್ಟಕ್ಕೆ ಬೆಳೆಸಿತ್ತು. ಸಿನಿಮಾ ರಂಗದಲ್ಲಿ ಅವರ ಸಾಧನೆ ಅಜರಾಮರ. ಆದರೆ ವೈಯಕ್ತಿಕವಾಗಿ ಅವರ ಅಗಲಿಕೆ ನನಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ನನ್ನ ಜೀವನದಲ್ಲಿ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ದಶಕಗಳ ಒಡನಾಟದ ನಂತರ ಇದೀಗ ಕೇವಲ ನೆನಪುಗಳಷ್ಟೇ ಉಳಿದಿವೆ,” ಎಂದು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚಿತ್ರರಂಗದ ‘ಹೀ ಮ್ಯಾನ್’ ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ (89) ಅವರು ನವೆಂಬರ್ 24 ರಂದು ವಿಧಿವಶರಾಗಿದ್ದರು. ನವೆಂಬರ್ 10 ರಂದು ಅನಾರೋಗ್ಯದ ಕಾರಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಮನೆಗೆ ಕರೆತರಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ವಿಲೆ ಪಾರ್ಲೆಯಲ್ಲಿರುವ ಪವನ್ ಹನ್ಸ್ ಚಿತಾಗಾರದಲ್ಲಿ ನಡೆದ ಅವರ ಅಂತಿಮ ವಿಧಿವಿಧಾನಗಳಲ್ಲಿ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ದಂಡೇ ಹರಿದುಬಂದು ಅಂತಿಮ ನಮನ ಸಲ್ಲಿಸಿತ್ತು. ಶೋಲೆ, ಚುಪ್ಕೆ ಚುಪ್ಕೆ ಅಂತಹ ಅದ್ಭುತ ಚಿತ್ರಗಳನ್ನು ನೀಡಿದ್ದ ಧರ್ಮೇಂದ್ರ ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.






