ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಆಕ್ಷೇಪಾರ್ಹ ವಿಷಯ’ಗಳ (Objectionable Content) ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಜೊತೆಗೆ, ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ನ್ಯಾಯಾಲಯ ಮಹತ್ವದ ಚರ್ಚೆ ನಡೆಸಿತು.
ಯೂಟ್ಯೂಬ್‌ನ ‘ಇಂಡಿಯಾಸ್ ಗಾಟ್ ಲೇಟೆಂಟ್’ (India’s Got Latent) ಶೋಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದದ ಹಿನ್ನೆಲೆಯಲ್ಲಿ, ಹಾಸ್ಯ ಕಲಾವಿದರಾದ ಸಮಯ್ ರೈನಾ ಮತ್ತು ರಣವೀರ್ ಅಲ್ಹಾಬಾದಿಯಾ ಅವರ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಒಬ್ಬ ವ್ಯಕ್ತಿ ಏನನ್ನು ಬೇಕಾದರೂ ಮಾಡಲು ಸಾಧ್ಯವಿಲ್ಲ,” ಎಂದು ಪ್ರತಿಪಾದಿಸಿ, ಬಳಕೆದಾರರು ರಚಿಸುವ ವಿಷಯಗಳಿಗೆ (User Generated Content) ನಿಯಂತ್ರಣದ ಅಗತ್ಯವಿದೆ ಎಂದು ಸೂಚಿಸಿದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ನಾನು ನನ್ನದೇ ಆದ ಚಾನೆಲ್ ರಚಿಸಿಕೊಂಡು, ಯಾರಿಗೂ ಉತ್ತರದಾಯಿಯಲ್ಲದಂತೆ ವರ್ತಿಸುವುದು ವಿಚಿತ್ರವಾಗಿದೆ,” ಎಂದು ಅಚ್ಚರಿ ವ್ಯಕ್ತಪಡಿಸಿದರು. “ಎಲ್ಲದಕ್ಕೂ ಅನುಮತಿ ನೀಡಿದರೆ ಮುಂದೆ ಗತಿಯೇನು?” ಎಂದು ಅವರು ಪ್ರಶ್ನಿಸಿದರು. ವಯಸ್ಕರ ವಿಷಯಗಳಿಗೆ (Adult Content) ಪೋಷಕರ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಇರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.
“ವಿಷಯವು ಸಮಾಜದ ರಚನೆಗೆ ಅಡ್ಡಿಪಡಿಸುವಂತಿದ್ದರೆ ಅಥವಾ ದೇಶವಿರೋಧಿಯಾಗಿದ್ದರೆ ಕೇವಲ ಸ್ವಯಂ ನಿಯಂತ್ರಣ ಸಾಲದು. ಸರ್ಕಾರ ಪ್ರತಿಕ್ರಿಯಿಸುವಷ್ಟರಲ್ಲೇ ಅಂತಹ ವಿಡಿಯೋಗಳು ಕೋಟ್ಯಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿರುತ್ತವೆ,” ಎಂದು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಕಳವಳ ವ್ಯಕ್ತಪಡಿಸಿದರು. ಆನ್‌ಲೈನ್ ವಿಷಯಗಳನ್ನು ನಿಯಂತ್ರಿಸಲು ಸ್ವಾಯತ್ತ ಸಂಸ್ಥೆಯೊಂದರ ಅಗತ್ಯವಿದೆ ಎಂದು ಕೋರ್ಟ್ ಪ್ರತಿಪಾದಿಸಿತು.
ಇದೇ ವೇಳೆ, ವಿಕಲಚೇತನ ವ್ಯಕ್ತಿಗಳ ಬಗ್ಗೆ ಆಕ್ಷೇಪಾರ್ಹ ಜೋಕ್ ಮಾಡಿದ ಆರೋಪ ಎದುರಿಸುತ್ತಿರುವ ಸಮಯ್ ರೈನಾ ಮತ್ತು ಇತರ ಮೂವರು ಹಾಸ್ಯ ಕಲಾವಿದರಿಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಈ ಕಲಾವಿದರು ತಮ್ಮ ಕಾರ್ಯಕ್ರಮಗಳಿಗೆ ವಿಶೇಷ ಚೇತನರನ್ನು ಆಹ್ವಾನಿಸಬೇಕು ಮತ್ತು ಅವರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಲು ತಿಂಗಳಿಗೆ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದೆ. ಕ್ಯೂರ್ ಎಸ್‌ಎಂಎ ಫೌಂಡೇಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.






