ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ಚಳಿಯ ಅಪ್ಪುಗೆಯಲ್ಲಿದ್ದು, ನಗರದ ನಿವಾಸಿಗಳು ನಡುಗುವಂತಾಗಿದೆ. ಬೆಂಗಳೂರಿನ ಈ ಶೀತ ಹವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, ನೆಟಿಜನ್‌ಗಳು ತಮಾಷೆಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಾಸ್ಯನಟ ತನ್ಮಯ್ ಭಟ್ ಸೇರಿದಂತೆ ಹಲವರು ಬೆಂಗಳೂರಿನ ಚಳಿಯನ್ನು ಉತ್ತರ ಭಾರತದ ಕಠಿಣ ಚಳಿಗಾಲಕ್ಕೆ ಹೋಲಿಸಿದ್ದು, “ಬೆಂಗಳೂರು ಫ್ರೀಜ್ ಆಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು, “ಬೆಂಗಳೂರಿನಲ್ಲಿ ಇಷ್ಟು ಚಳಿಯಿದ್ದರೆ, ಕಸೋಲ್ ಪರಿಸ್ಥಿತಿ ಇನ್ನೆಂಗಿರಬೇಡ,” ಎಂದು ತಮಾಷೆ ಮಾಡಿದ್ದಾರೆ.
ದಟ್ಟ ಮಂಜಿನಿಂದ ವಿಮಾನ ಸಂಚಾರ ಅಸ್ತವ್ಯಸ್ತ
ಕೇವಲ ಚಳಿ ಮಾತ್ರವಲ್ಲದೆ, ದಟ್ಟವಾದ ಮಂಜು ಕೂಡ ನಗರದ ಜನಜೀವನದ ಮೇಲೆ ಪರಿಣಾಮ ಬೀರಿದೆ. ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ದಟ್ಟ ಮಂಜಿನ ಕಾರಣದಿಂದಾಗಿ ಬೆಳಗಿನ ಜಾವ 5.30 ರಿಂದ ಸುಮಾರು 41 ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಪ್ರಯಾಣಿಕರು ಮಂಜಿನಿಂದಾಗಿ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಯಿತು.
ಗುರುವಾರ ಬೆಳಿಗ್ಗೆ ನಗರದ ಹಲವು ಭಾಗಗಳಲ್ಲಿ ಹಗುರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಯಾವುದೇ ಗಂಭೀರ ಎಚ್ಚರಿಕೆ ನೀಡದಿದ್ದರೂ, ಮುಂದಿನ ದಿನಗಳಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ಕುಸಿಯುತ್ತಿರುವ ವಾಯು ಗುಣಮಟ್ಟ (AQI)
ಚಳಿಯ ಜೊತೆಗೆ ನಗರದ ವಾಯು ಗುಣಮಟ್ಟದಲ್ಲೂ ಏರುಪೇರಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ‘ಸಮೀರ್’ ಆ್ಯಪ್ ಪ್ರಕಾರ, ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 115 ರಷ್ಟಿದ್ದು, ‘ಮಧ್ಯಮ’ (Moderate) ವರ್ಗದಲ್ಲಿದೆ. ಕಳೆದ ಮೂರು ದಿನಗಳಿಗೆ ಹೋಲಿಸಿದರೆ (ನ.25 ರಂದು 87, ನ.26 ರಂದು 96, ನ.27 ರಂದು 103) ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದು ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆ ಇರುವವರಿಗೆ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.






