ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ, ಭೂಸ್ವಾಧೀನಕ್ಕೆ (Land Acquisition) ಒಳಪಟ್ಟ ರೈತರ ಜಮೀನುಗಳಿಗೆ ಜಿಲ್ಲಾಡಳಿತವು ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ರೈತರ ವಿರೋಧದ ನಡುವೆಯೂ, ಯೋಜನೆಯ ಬಹುತೇಕ ಮಂದಿಯ ಒಪ್ಪಿಗೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿಡದಿ ಬಳಿಯ 9 ಗ್ರಾಮಗಳ ಒಟ್ಟು 7,481 ಎಕರೆಯಷ್ಟು ಭೂಮಿಯನ್ನು ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆಗಾಗಿ ಭೂ ಸ್ವಾಧೀನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಭೂಸ್ವಾಧೀನ ಕಾಯ್ದೆ 2013 ರ ಅನ್ವಯ ದರ ನಿಗದಿ ಮಾಡಲಾಗಿದೆ. ಪ್ರತಿ ಎಕರೆಗೆ ಕನಿಷ್ಠ ₹2.55 ಕೋಟಿಯಿಂದ ಗರಿಷ್ಠ ₹2.7 ಕೋಟಿ ವರೆಗೆ ಪರಿಹಾರವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ, ಜಮೀನಿನಲ್ಲಿರುವ ತೆಂಗು, ಮಾವು ಸೇರಿದಂತೆ ಇತರ ಮರಗಳಿಗೂ ಪ್ರತ್ಯೇಕ ದರ ನಿಗದಿಪಡಿಸಿ ಪರಿಹಾರ ನೀಡಲಾಗುತ್ತದೆ.
ಜಿಲ್ಲಾಧಿಕಾರಿ (Deputy Commissioner ) ಅವರು ನವೆಂಬರ್ 6 ರಂದು ಭೂಮಾಲೀಕರೊಂದಿಗೆ ಸಭೆ ನಡೆಸಿ, ಯೋಜನೆಗೆ ಪರ-ವಿರೋಧದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಸಭೆಯಲ್ಲಿ ಒಪ್ಪಿಗೆ ಕೊಟ್ಟಿರಲಿಲ್ಲ ಹಾಗೂ ಇನ್ನೊಂದಷ್ಟು ಬಹುತೇಗ ರೈತರು ಒಪ್ಪಿಗೆ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ದರ ನಿಗದಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಜಿಬಿಡಿಎ ಅಧ್ಯಕ್ಷ ನಟರಾಜ್ (GBDA Chairman, Natara)ಅವರು, ರೈತರಿಗೆ ಅನ್ಯಾಯವಾಗದಂತೆ ಟೌನ್‌ಶಿಪ್ ಯೋಜನೆ ಮಾಡಲಾಗುತ್ತದೆ. ರೈತರ ಮನವಿ ಮೇರೆಗೆ ಉತ್ತಮವಾದ ದರ ನಿಗದಿ ಮಾಡಲಾಗಿದೆ. ಹಣ ಬೇಡ ಎನ್ನುವ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು (Sites) ನೀಡಲಾಗುವುದು. ಯೋಜನೆಗೆ ವಿರೋಧ ಇರುವ ರೈತರನ್ನೂ ಕೂಡ ಮನವೊಲಿಸುವ ಪ್ರಯತ್ನ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.






