ಬೆಂಗಳೂರು: ಅಕ್ರಮ ಸಂಬಂಧಕ್ಕಾಗಿ (Illicit affair) ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿ, ನಂತರ ಮೃತದೇಹವನ್ನು ಸುಟ್ಟುಹಾಕಿರುವ (Burnt )ಕೃತ್ಯ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಗಂಗೊಂಡಗಳ್ಳಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದುರ್ದೈವಿ ಯಾದಗಿರಿ ಮೂಲದ ಬಸವರಾಜು (Basavaraju) (28). ಈ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದು, ಆರೋಪಿಗಳಾದ ಪತ್ನಿ ಶರಣಮ್ಮ (25), ಪ್ರಿಯಕರ ವೀರಭದ್ರ (19) ಮತ್ತು ಕೊಲೆಗೆ ಸಹಾಯ ಮಾಡಿದ ಅನಿಲ್ ಎಂಬಾತನನ್ನು ಬಂಧಿಸಿದ್ದಾರೆ.
ಬಸವರಾಜು ಮತ್ತು ಶರಣಮ್ಮ (Basavaraju and Sharanamma) ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಾರೆ ಕೆಲಸ ಮಾಡುವ ಬಸವರಾಜು ಮತ್ತು ಶರಣಮ್ಮ, ವೀರಭದ್ರನ ತಂದೆಯ ಬಳಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಕೆಲಸಗಾರರನ್ನು ಬಿಲ್ಡಿಂಗ್ ಬಳಿ ಕರೆದುಕೊಂಡು ಬರುವುದು ಮತ್ತು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ವೀರಭದ್ರನ ಜೊತೆ ಶರಣಮ್ಮನಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರಷ್ಟು ಸಲುಗೆ ಬೆಳೆಸಿಕೊಂಡಿದ್ದರು.
ಒಂದು ತಿಂಗಳ ಹಿಂದೆಯೇ ಬಸವರಾಜುನ ಕೊಲೆ ಮಾಡಲು ಶರಣಮ್ಮ ಮತ್ತು ವೀರಭದ್ರ ಪ್ಲಾನ್ ಮಾಡಿದ್ದರು. ಕಳೆದ ಶುಕ್ರವಾರ ಬಸವರಾಜು ಮನೆಯಲ್ಲಿ ಮದ್ಯಪಾನ ಮಾಡಿ ಮಲಗಿದ್ದಾಗ, ಶರಣಮ್ಮ ವೀರಭದ್ರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು.
ಮೊದಲು, ಇಬ್ಬರೂ ಸೇರಿ ಬಸವರಾಜುನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲು ಪ್ರಯತ್ನಿಸಿದರು. ಆದರೆ ಬಸವರಾಜು ಸಾವನ್ನಪ್ಪದೆ ಇದ್ದಾಗ, ಆರೋಪಿಗಳು ನೇಣು ಹಾಕಿ ಕೊಲೆ ಮಾಡಿದರು. ಇದೇ ವೇಳೆ ಮೃತದೇಹವನ್ನು ಸಾಗಿಸಲು ವೀರಭದ್ರನು ಅನಿಲ್ ಎಂಬಾತನನ್ನು ಕರೆಸಿಕೊಂಡಿದ್ದು, ರಾತ್ರಿ 12:30 ಕ್ಕೆ ಎಲ್ಲರೂ ಮಲಗಿರುವುದನ್ನು ಗಮನಿಸಿ, ಮೃತದೇಹವನ್ನು ಹಳೆಯ ಬಟ್ಟೆಗಳಲ್ಲಿ ಸುತ್ತಿ ಚೀಲದಲ್ಲಿ ಹಾಕಿಕೊಂಡು ಗಂಗೊಂಡಗಳ್ಳಿಯ ನಿರ್ಜನ ಪ್ರದೇಶಕ್ಕೆ ಸಾಗಿಸಿದರು. ನಂತರ, ಅಲ್ಲಿ ಒಂದು ಲೀಟರ್ ಪೆಟ್ರೋಲ್ (petrol) ಸುರಿದು, ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು(Madanayakanahalli Police), ತಡರಾತ್ರಿ ಮೂವರು ಆರೋಪಿಗಳನ್ನು ಬಂಧಿಸಿ, ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ.






