ಉತ್ತರ ಪ್ರದೇಶ : ದೇಹದಲ್ಲಿ ಪ್ರೋಟೀನ್ (Protein) ಅಂಶದ ಕೊರತೆ ಉಂಟಾದರೆ, ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು, ದೀರ್ಘಕಾಲದವರೆಗೂ ಕಾಡುವ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರತಿ ದಿನ ಒಂದೊಂದು ಮೊಟ್ಟೆಯನ್ನು (One egg)ತಿಂದರೇ ನಮ್ಮ ದೇಹಕ್ಕೆ ಉತ್ತಮವಾದ ಪ್ರೋಟೀನ್ ಸಿಗುತ್ತದೆ ಎಂದು ಮೊಟ್ಟೆಯನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯನ್ನು ನೋಡಿದರೆ ಪ್ರತಿದಿನ ಮೊಟ್ಟೆ ತಿನ್ನುವುದು ಎಷ್ಟರ ಮಟ್ಟಿಗೆ ಸೇಫ್ ಎನಿಸುತ್ತದೆ.
ಉತ್ತರ ಪ್ರದೇಶದಲ್ಲಿ(Uttar Pradesh) ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಅಧಿಕಾರಿಗಳು, ಬಿಳಿ ಮೊಟ್ಟೆಗಳನ್ನು ಕೃತಕವಾಗಿ ಕಂದು ಬಣ್ಣ ಹಚ್ಚಿ ‘‘ದೇಸಿ ಮೊಟ್ಟೆ’ಗಳಂತೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವಲಯವೊಂದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ಸಂದರ್ಭದಲ್ಲಿ ಒಟ್ಟು 45,000 ಕೃತಕವಾಗಿ ಬಣ್ಣ ಹಚ್ಚಿದ ಮೊಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸಾಮಾನ್ಯ ಬಿಳಿ ಮೊಟ್ಟೆಗಳಿಗೆ ರಾಸಾಯನಿಕ ಬಣ್ಣ(Chemical dyes) ಬಳಸಿ ಕಂದು ಮೊಟ್ಟೆ (Desi Eggs)ಗಳಂತೆ ತೋರಿಸಿ, ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ದೇಸಿ ಮೊಟ್ಟೆ ಹೆಚ್ಚು ಪೌಷ್ಟಿಕತೆ ಇದೆ ಎನ್ನುವ ನಂಬಿಕೆಯಿಂದ ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆ ಇರುವುದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು.
FSSAI ಅಧಿಕಾರಿಗಳು, ಬಣ್ಣಕ್ಕೆ ಬಳಸಿದ ರಾಸಾಯನಿಕ ದ್ರವ್ಯಗಳ ಸ್ವರೂಪ, ಮೊಟ್ಟೆಗಳ ಮೂಲ, ವಿತರಣಾ ಜಾಲ ಸೇರಿದಂತೆ ಸಂಪೂರ್ಣ ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಗ್ರಾಹಕರಲ್ಲಿ ಆಹಾರ ಮಿಶ್ರಣ (Adulteration) ಮತ್ತು ನಕಲಿ ಉತ್ಪನ್ನಗಳ ಬಗ್ಗೆ ಹೊಸ ಆತಂಕ ಉಂಟುಮಾಡಿದೆ.






